ಟೊಕಿಯೊ: ರಸ್ತೆ ಮೇಲೆ ಓಡಾಡುವ, ಕಡಿದಾದ ರಸ್ತೆಯಲ್ಲಿ ಸರಾಗವಾಗಿ ಚಲಿಸುವ ಬೈಕ್ ಗಳನ್ನು ಕಂಡ ನಮಗೆ ಜಪಾನ್ನ ನವೋದ್ಯಮವೊಂದು ಹಾರುವ ಬೈಕನ್ನು ಸಿದ್ದಪಡಿಸಿದೆ. ಇದಕ್ಕೆ ಜಗತ್ತಿನ ಮೊದಲ ಹಾರುವ ಬೈಕ್ ಎಂಬ ಕೀರ್ತಿಯೂ ಲಭಿಸಿದೆ
ಜಪಾನ್ನ ನವೋದ್ಯಮ ಎ.ಎಲ್.ಐ ಟೆಕ್ನಾಲಜೀಸ್ ಜಗತ್ತಿನ ಮೊದಲ ವಾಣಿಜ್ಯ ಹೊವರ್ ಬೈಕ್ ಎಕ್ಸ್ಟುರಿಸ್ಮೊ ಲಿಮಿಟೆಡ್ ಎಡಿಷನ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಜಪಾನ್ನ ಶಿಝುವೊಕಾ ಪ್ರಿಫೆಕ್ಚರ್ನ ಫುಜಿ ಸ್ಪೀಡ್ವೇ ರೇಸಿಂಗ್ ಕೋರ್ಸ್ನ ರೇಸ್ ಟ್ರಾ್ಯಕ್ನಲ್ಲಿ ಈ ವಾಹನವನ್ನು ಅನಾವರಣಗೊಳಿಸಲಾಗಿದೆ.
ಎಷ್ಟು ಎತ್ತರ ಹಾರುತ್ತೆ ಗೊತ್ತೆ?
ನಿಂತ ಸ್ಥಳದಲ್ಲೇ 3 ಮೀಟರ್ ಎತ್ತರಕ್ಕೆ ಹಾರಿ ಬಳಿಕ ಗಂಟೆಗೆ 30 ಕಿ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುವ ಫ್ಲೈಯಿಂಗ್ ಬೈಕ್ ಇದು. ಇದು 3.7 ಮೀಟರ್ ಉದ್ದ ಇದ್ದು ಆರು ಪ್ರೊಪೆಲ್ಲರ್ಗಳನ್ನು ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಹೊಂದಿದೆ. ಈ ಪ್ರೊಪೆಲ್ಲರ್ಗಳು ತಿರುಗಲಾರಂಭಿಸಿದಾಗ ಇದು ಹಾರಾಟ ಶುರುಮಾಡುತ್ತದೆ. ಸಾಂಪ್ರದಾಯಿಕ ಇಂಜಿನ್ ಮತ್ತು ಕನಿಷ್ಠ 4 ಬ್ಯಾಟರಿ ಇದರಲ್ಲಿದೆ.

ಇದರ ಬೆಲೆಯೆಷ್ಟು?
ಜಗತ್ತಿನ ಮೊದಲ ಹಾರುವ ಬೈಕಿನ ದರವನ್ನು 77.7 ದಶಲಕ್ಷ ಯೆನ್ ದರ ನಿಗದಿ ಮಾಡಿದೆ. ಅಂದರೇ ಭಾರತದ ರೂಪಾಯಿಗಳ ಲೆಕ್ಕದಲ್ಲಿ ಇದರ ಮೌಲ್ಯ 5ಕೋಟಿ 8 ಲಕ್ಷ ರೂಪಾಯಿಗಳು.ಈ ನವೋದ್ಯಮಕ್ಕೆ ಫುಟ್ಬಾಲ್ ತಾರೆ ಕೈಸುಕೆ ಹೊಂಡಾ ಹೂಡಿಕೆ ಮಾಡಿದ್ದಾರೆ. ನಾಲ್ಕು ವರ್ಷದ ಸತತ ಪರಿಶ್ರಮದ ಫಲವಾಗಿ ಈ ಬೈಕ್ ರೂಪುಗೊಂಡಿದೆ