ಮಂಗಳೂರು, ಅ.29: ಉತ್ತರ ಭಾರತ ಮೂಲದ ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಖ್ಯಾತ ವಕೀಲರಾದ ಕೆ.ಎಸ್.ಎನ್.ರಾಜೇಶ್‌ನ ನಿರೀಕ್ಷಣಾ ಜಾಮೀನು ಅರ್ಜಿ ಶುಕ್ರವಾರ ತಿರಸ್ಕೃತಗೊಂಡಿದೆ. ಆದರೆ, ಅದೇ ಪ್ರಕರಣದ ಇತರ ಮೂವರು ಬಂಧಿತ ಆರೋಪಿಗಳಿಗೆ ಜಾಮೀನು ದೊರೆತಿದೆ.
ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ರಾಜೇಶ್ ಭಟ್ ತನ್ನ ವಕೀಲರ ಮೂಲಕ ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಜಿಲ್ಲಾ 6ನೇ ಹೆಚ್ಚುವರಿ ಸತ್ರ ನ್ಯಾಯಾಲಯ ಆ ಅರ್ಜಿಯನ್ನು ವಜಾಗೊಳಿಸಿದೆ.
ಇದೇ ಪ್ರಕರಣದಲ್ಲಿ ಬಂಧಿತರಾಗಿರುವ ಪ್ರಮುಖ ಆರೋಪಿಗೆ ಪ್ರಕರಣ ಮುಚ್ಚಿ ಹಾಕಲು ನೆರವಾದ ಆರೋಪ ಎದುರಿಸುತ್ತಿರುವ ಸಂತ್ರಸ್ತೆಯ ಸ್ನೇಹಿತ ಧ್ರುವ ಹೆಗ್ಡೆ, ಆತನ ತಾಯಿ ಮಹಾಲಕ್ಷ್ಮೀ ಹೆಗ್ಡೆ ಹಾಗೂ ಶಿವಾನಂದ ಅವರಿಗೆ ನ್ಯಾಯಾಲಯ ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ.

ರಾಜೇಶ್ ಭಟ್‌ಗೆ ತಲೆಮರೆಸಿಕೊಳ್ಳಲು ಸಹಕಾರ ನೀಡಿದ ಹಾಗೂ ಅವರ ಮೊಬೈಲ್ ಹಾಗೂ ಪೋನನ್ನು ಬಚ್ಚಿಡಲು ನೆರವಾದ ಆರೋಪದಡಿ ಬಂಧಿತರಾಗಿದ್ದ ಬೊಂದೇಲ್‌ನ ಅನಂತ ಭಟ್ ಗುರುವಾರವೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.