ಪುತ್ತೂರು: ಸರಿಯಾಗಿ ಹಾಗೂ ಪೂರ್ತಿಯಾಗಿ ವೇತನ ಪಾವತಿಯಾಗುತಿಲ್ಲ , ಒಂದೂವರೆ ವರ್ಷಗಳಿಂದ ನಿವೃತ್ತರ ಗ್ರಾಚ್ಯುಟಿ ಪಾವತಿಗೆ ಬಾಕಿಯಿದೆ, ಇದನ್ನು ಪಾವತಿಸುವ ಬಗ್ಗೆ ಆದೇಶ ಪತ್ರ ನೀಡಬೇಕೆಂದು ಅಗ್ರಹಿಸಿ ಕೆಎಸ್ಆರ್ಟಿಸಿ ಮಜ್ದೂರ್ ಸಂಘದ ಹತ್ತು ಸದಸ್ಯರು ಕಳೆದರಡು ದಿನಗಳಿಂದ ನಡೆಸುತಿದ್ದ ಅರ್ಹನಿಸಿ ಉಪವಾಸ ಸತ್ಯಾಗ್ರಹವನ್ನು ಅ 26 ರಂದು ರಾತ್ರಿ ಹಠಾತ್ ಕೈ ಬಿಟ್ಟಿದ್ದಾರೆ.
ಸಚಿವ ಎಸ್. ಅಂಗಾರರು ಸ್ಥಳಕ್ಕೆ ಭೇಟಿ ನೀಡಿ ಸತ್ಯಾಗ್ರಹಿಗಳೊಂದಿಗೆ ಮಾತುಕತೆ ನಡೆಸಿ ಕೆಎಸ್ಅರ್ಟಿಸಿ ಗೆ ಸೇರಿದ ಸ್ವತ್ತುಗಳನ್ನು ಒತ್ತೆಯಿಟ್ಟು ಸಾಲ ತೆಗೆದು ತಿಂಗಳ ಒಳಗೆ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದರು. ಸಚಿವರ ಭರವಸೆಯ ಮೇಲೆ ವಿಶ್ವಾಸವಿಟ್ಟು ಉಪಾವಸ ಕೈ ಬಿಡುವಂತೆ ಶಾಸಕ ಸಂಜೀವ ಮಠಂದೂರು ಕೂಡ ವಿನಂತಿಸಿದ್ದು ಸಚಿವರು ಹಾಗೂ ಶಾಸಕರ ಮನವಿಗೆ ಸ್ಪಂದಿಸಿದ ಸತ್ಯಾಗ್ರಹಿಗಳು ಉಪಾವಸ ಕೈ ಬಿಟ್ಟಿದ್ದಾರೆ.
ಕಡಿತ ಮಾಡಲಾದ ವೇತನವನ್ನು ಪೂರ್ತಿ ನೀಡುವ ಮತ್ತು ಒಂದೂವರೆ ವರ್ಷಗಳಿಂದ ಬಾಕಿಯಾದ ನಿವೃತ್ತರ ಗ್ರಾಚ್ಯುಟಿ ಮೊತ್ತವನ್ನು ನೀಡುವ ಆದೇಶ ಪತ್ರ ನೀಡದ ಹೊರತು ಉಪವಾಸ ಸತ್ಯಾಗ್ರಹ ಹಿಂದಕ್ಕೆ ಪಡೆಯುವುದಿಲ್ಲ ಎಂದು ಉಪವಾಸ ನಿರತರು ಪಟ್ಟು ಹಿಡಿದಿದ್ದರು. ಬಿಎಂಎಸ್ ಸಂಯೋಜಿತ ಪುತ್ತೂರು ವಿಭಾಗ ಕೆಎಸ್ಆರ್ಟಿಸಿ ಮಜ್ದೂರ್ ಸಂಘದ 10 ಸದಸ್ಯರು ಸೋಮವಾರ ಬೆಳಗ್ಗೆ ಇಲ್ಲಿನ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು ಇವರು 2 ದಿನ ಅಹರ್ನಿಷಿ ಉಪವಾಸ ಸತ್ಯಾಗ್ರಹ ನಡೆಸಿದ್ದರು.
ಅ .26ರ ರಾತ್ರಿ ಅಲ್ಲಿ ಭೇಟಿ ನೀಡಿದ ಸಚಿವ ಅಂಗಾರರು ಕೆಎಸ್ಆರ್ಟಿಸಿ ಆರ್ಥಿಕ ಸಂಕಷ್ಟದಲ್ಲಿದೆ. ಇದರಿಂದ ಪೂರ್ತಿ ವೇತನ, ನಿವೃತ್ತಿ ಸೌಲಭ್ಯ ನೀಡಲು ಕಷ್ಟವಾಗಿದೆ. ಇದು ಪುತ್ತೂರು ವಿಭಾಗವೊಂದರ ಸಮಸ್ಯೆಯಲ್ಲ. ಇಡೀ ರಾಜ್ಯದ ಸಮಸ್ಯೆ. ಆರ್ಥಿಕ ಸಂಕಷ್ಟದಿಂದ ಪಾರಾಗಲು ಕೆಎಸ್ಆರ್ಟಿಸಿಯು 220 ಕೋಟಿ ರೂ.ಗಳನ್ನು ಬ್ಯಾಂಕ್ಗಳಿಂದ ಸಾಲ ಪಡೆಯಲಿದೆ. ಸಾಲಕ್ಕಾಗಿ ಸಂಸ್ಥೆಯ ಸ್ವತ್ತುಗಳನ್ನು ಅಡವಿಡಲು ನಿರ್ಧರಿಸಲಾಗಿದೆ. ಇದಕ್ಕೆ ಸರಕಾರದ ಗ್ಯಾರಂಟಿಯೂ ಬೇಕಾಗಿದೆ. ಈ ಪ್ರಕ್ರಿಯೆ 3-4 ದಿನಗಳಲ್ಲಿ ನಡೆಯಲಿದೆ. ಲೋನ್ ಸಿಕ್ಕಿದ ಕೂಡಲೇ ಬಾಕಿ ವೇತನ, ಇತರ ಸೌಲಭ್ಯ ಕಲ್ಪಿಸಲಾಗುವುದು . ಒಂದು ತಿಂಗಳ ಒಳಗೆ ಈ ಎಲ್ಲ ಸಮಸ್ಯೆ ಪರಿಹಾರವಾಗಿ ಬೇಡಿಕೆ ಈಡೇರಲಿದೆ ಎಂದರು.

ಇದನ್ನು ಲಿಖಿತವಾಗಿ ನೀಡುವಂತೆ ಸತ್ಯಾಗ್ರಹ ನಿರತರು ಆಗ್ರಹಿಸಿದರು. ಲಿಖಿತವಾಗಿ ನೀಡಲು ಸಾಧ್ಯವಿಲ್ಲ ಎಂದು ಸಚಿವರು ಉತ್ತರಿಸಿದ್ದು, ತಾಂತ್ರಿಕ ಸಮಸ್ಯೆಗಳಿವೆ ಎಂದರು. ಬಳಿಕ ಶಾಸಕ ಸಂಜೀವ ಮಠಂದೂರು, ಪುತ್ತೂರು ನಗರಸಭಾಧ್ಯಕ್ಷ ಕೆ. ಜೀವಂಧರ್ ಜೈನ್, ಪುತ್ತೂರು ಪುಡಾ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ಅವರು ಈ ಕುರಿತ ತಾಂತ್ರಿಕ ಸಮಸ್ಯೆಯನ್ನು ಹೇಳಿದರಲ್ಲದೆ ಸಂಸ್ಥೆಯ ಹಿತಾಸಕ್ತಿಗಾಗಿ ಸದಾ ಕೆಲಸ ಮಾಡುತ್ತಿರುವ ಬಿಎಂಎಸ್ ಸಂಘಟನೆಯು ಈ ಹಿಂದೆ ಮಾಡಿದ ಉತ್ತಮ ಕಾರ್ಯಗಳ ಕುರಿತು ಪ್ರಸ್ತಾಪಿಸಿದರು. ಕೊನೆಯ ಹಂತದಲ್ಲಿ ನೌಕರರು ಸಚಿವರ ಮಾತಿಗೆ ಮನ್ನಣೆ ಕೊಟ್ಟು ಅಮರಣಾಂತ ಉಪವಾಸವನ್ನು ಕೊನೆಗೊಳಿಸಿದರು. ಸಚಿವ ಎಸ್. ಅಂಗಾರ ಅಮರಣಾಂತ ಉಪವಾಸ ನಿರತರಿಗೆ ಪಾನೀಯ ನೀಡುವ ಮೂಲಕ ಉಪವಾಸವನ್ನು ಮುಕ್ತಾಯಗೊಳಿಸಿದರು
ಕೆಎಸ್ಆರ್ಟಿಸಿ ಮುಖ್ಯ ಭದ್ರತಾಧಿಕಾರಿ ಶ್ರೀನಿವಾಸ್, ಪುತ್ತೂರು ವಿಭಾಗ ನಿಯಂತ್ರಣಾಧಿಕಾರಿ ಕೆ. ಜಯಕರ ಶೆಟ್ಟಿ, ಪುತ್ತೂರು ವಿಭಾಗ ಕೆಎಸ್ಆರ್ಟಿಸಿ ಮಜ್ದೂರ್ ಸಂಘದ ಅಧ್ಯಕ್ಷ, ನ್ಯಾಯವಾದಿ ಗಿರೀಶ್ ಮಳಿ, ಸಂಘದ ಪುತ್ತೂರು ಘಟಕದ ಅಧ್ಯಕ್ಷ ಮಾಡಾವು ವಿಶ್ವನಾಥ್ ರೈ, ಪ್ರಮುಖರಾದ ಶಾಂತಾರಾಮ ವಿಟ್ಲ, ವೆಂಕಟ್ರಮಣ ಭಟ್, ರಾಮಕೃಷ್ಣ ಜಿ., ಸತ್ಯಶಂಕರ ಭಟ್, ಸಂಜೀವ ಗೌಡ, ಕರುಣಾಕರ ಗೌಡ, ಮಹಾಬಲ ಗಡಿಮಾರು ಮತ್ತಿತರರು ಉಪಸ್ಥಿತರಿದ್ದರು.
ಮನವೊಲಿಕೆಯ ವಿಡಿಯೋ ನೋಡಲು ಕೆಳಗೆ ಕ್ಲಿಕ್ ಮಾಡಿ :