ಉಪ್ಪಿನಂಗಡಿ: ರಾಜ್ಯ ಸರ್ಕಾರದಿಂದ ಜಿಲ್ಲೆಗೆ ಒಂದು ಗೋಶಾಲೆ ಯೋಜನೆ ಮಂಜೂರು ಆಗಿದ್ದು, ದ.ಕ. ಜಿಲ್ಲೆಗೆ ಮಂಜೂರು ಆಗಿರುವ ಗೋಶಾಲೆಗೆ ಕೊಯಿಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಅಧೀನದಲ್ಲಿದ್ದ 98.45 ಎಕ್ರೆ ಜಾಗ ಮಂಜೂರು ಆಗಿದ್ದು, ಜಾಗ ಹಸ್ತಾಂತರ ಕಾರ್ಯಕ್ರಮ ಅ. 26ರಂದು ನಡೆಯಿತು.
ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ರಾಮಕುಂಜ ಗ್ರಾಮದ ಬರೆಂಪಾಡಿ ಪೆರ್ಜಿ ಎಂಬಲ್ಲಿ ಈ ಗೋಶಾಲೆ ಆರಂಭ ಆಗಲಿದೆ.
ಕೊಯಿಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಅಧೀನದಲ್ಲಿದ್ದ ರಾಮಕುಂಜ ಗ್ರಾಮದ ಸರ್ವೆ ನಂಬ್ರ 233ರಲ್ಲಿ 85.20 ಎಕ್ರೆ ಮತ್ತು ಸರ್ವೆ ನಂಬ್ರ 299/1ರಲ್ಲಿ 13.25 ಎಕ್ರೆ ಸೇರಿದಂತೆ ಒಟ್ಟು 98.45 ಎಕ್ರೆ ಜಾಗದಲ್ಲಿ ಸರ್ಕಾರದಿಂದ ಮಂಜೂರು ಆಗಿರುವ ಪ್ರಾಣಿ ದಯಾ ಸಂಘದ ಮೂಲಕ ಆರಂಭವಾಗಲಿರುವ ಜಿಲ್ಲಾ ಗೋಶಾಲೆ ನಿರ್ಮಿಸುವ ಸಲುವಾಗಿ ಈ ಜಾಗದ ದಾಖಲೆ ಪತ್ರವನ್ನು ಕೊಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಉಪ ನಿರ್ದೇಶಕರಾದ ಡಾ. ಧರ್ಮಪಾಲ ಕರಂದ್ಲಾಜೆಯವರು ದ.ಕ. ಜಿಲ್ಲಾ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರಾದ ಡಾ. ಪ್ರಸನ್ನ ಕುಮಾರ್ ಟಿ.ಜಿ.ಯವರಿಗೆ ಹಸ್ತಾಂತರಿಸಿದರು.

ದಾಖಲೆ ಪತ್ರ ಸ್ವೀಕರಿಸಿದ ಡಾ. ಪ್ರಸನ್ನ ಕುಮಾರ್ ಟಿ.ಜಿ. ಮಾತನಾಡಿ ಜಿಲ್ಲಾ ಗೋಶಾಲೆ ನಿರ್ಮಾಣಕ್ಕೆ ಸರ್ಕಾರದಿಂದ ಈಗಾಗಲೇ 24 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಆಗಿದ್ದು, ಪ್ರಾಣಿ ದಯಾ ಸಂಘದ ಮೂಲಕ ಶೀಘ್ರವಾಗಿ ಗೋಶಾಲೆಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.
ದಾಖಲೆ ಹಸ್ತಾಂತರ ಸಂದರ್ಭದಲ್ಲಿ ಕೊಯಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರ್ಷಿತ್ ಕುಮಾರ್, ಕಾರ್‍ಯದರ್ಶಿ ಪಮ್ಮು, ರಾಮಕುಂಜ ಗ್ರಾಮಕರಣಿಕ ಶೇಷಾದ್ರಿ, ಕೊಯಿಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಡಾ. ಅಪರ್ಣಾ ಹೆಬ್ಬಾರ್, ಅಧೀಕ್ಷಕಿ ರೂಪಶ್ರೀ ಕೊಯಿಲ, ಜಾನುವಾರು ಅಭಿವೃದ್ಧಿ ಅಧಿಕಾರಿ ಕೃಷ್ಣ ಭಟ್, ಸಹಾಯಕ ದಿವಾಕರ
ಉಪಸ್ಥಿತರಿದ್ದರು.