ವಿಟ್ಲ: ಅ 26 : ಸವಾರನ ನಿಯಂತ್ರಣ ತಪ್ಪಿ ಬೈಕ್ ಮಗುಚಿ ಬಿದ್ದು ಅದರಲ್ಲಿ ಸಂಚರಿಸುತ್ತಿದ್ದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ವಿಟ್ಲ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಂಟ್ವಾಳ ತಾಲೂಕು ಪುಣಚ ಬೈಲುಗುತ್ತು ನಿವಾಸಿ ವನಿತಾ (50) ಮೃತಪಟ್ಟ ಮಹಿಳೆ.
ಕಲ್ಲಡ್ಕ – ಕಾಂಞಂಗಾಡು ಅಂತರಾಜ್ಯ ಹೆದ್ದಾರಿಯ ಕಾಶಿಮಠ – ಅಪ್ಪೆರಿಪಾದೆ ಮಧ್ಯೆ ಬೈಕ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಈ ಅಪಘಾತ ಸಂಭವಿಸಿದೆ. ಮೃತ ಮಹಿಳೆಯೂ ತನ್ನ ಪುತ್ರನ ಜತೆ ಬೈಕಿನಲ್ಲಿ ಪ್ರಯಾಣಿಸುತ್ತಿದ್ದಾಗ ದುರ್ಘಟನೆ ನಡೆದಿದೆ.
ವನಿತಾರವರು ಪುತ್ರನ ಜತೆ ವಿಟ್ಲಕ್ಕೆ ಹೋಗುತ್ತಿದ್ದ ಸಂದರ್ಭ ಬೈಕ್ ಏಕಾಏಕಿ ರಸ್ತೆಯಲ್ಲಿ ಮಗುಚಿ ಬಿದ್ದಿದೆ. ಇದರಿಂದ ಮಹಿಳೆಯ ತಲೆಯ ಭಾಗಕ್ಕೆ ಪೆಟ್ಟಾಗಿದ್ದು, ತಕ್ಷಣ ರಿಕ್ಷಾ ಮೂಲಕ ವಿಟ್ಲ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ಕೊಂಡೊಯ್ಯಲಾಗಿತ್ತು.

ಬಳಿಕ ಮಂಗಳೂರು ಖಾಸಗೀ ಆಸ್ಪತ್ರೆಗೆ ವರ್ಗಾವಣೆ ಮಾಡಲಾಗಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಮೃತ ಪಟ್ಟಿದ್ದಾರೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.