ಬೆಳ್ಳಾರೆ, ಅ. 25:,ಅಜುಮಾಸು 6ರ ಹರೆಯದ, ಎರಡನೇ ತರಗತಿಯ, ಪುಟಾಣಿ ಮಕ್ಕಳಿಬ್ಬರು ತಾವು ಶಾಲೆಗೆ ತೆರಳುವ ಕೆಸರು ತುಂಬಿದ ರಸ್ತೆಯನ್ನು ಹಾರೆ, ಗುದ್ದಲಿ ಹಿಡಿದು ದುರಸ್ತಿ ಕಾರ್ಯಕ್ಕೆ ಮುಂದಾದ ಘಟನೆ ಕರ್ನಾಟಕ ಸರಕಾರದ ಸಚಿವರಾದ ಎಸ್ ಅಂಗಾರರ ತವರು ಕ್ಷೇತ್ರ ಸುಳ್ಯದಲ್ಲಿ ನಡೆದಿದೆ.
ಈ ಬಗ್ಗೆ ಪೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಹಲವು ಮಾಧ್ಯಮ ಗಳು ವರದಿ ಪ್ರಕಟಿಸಿದರು. ಇದನ್ನು ಗಮನಿಸಿದ ಸುಳ್ಯದ ಹಿರಿಯ ಸಿವಿಲ್ ನ್ಯಾಯಾಲಯ ನ್ಯಾಯಾಧೀಶ ಸೋಮ ಶೇಖರ್ ಸ್ಥಳಕ್ಕೆ ಭೇಟಿ ನೀಡಿ ಮಕ್ಕಳ ಪೋಷಕರು , ಸ್ಥಳೀಯ ಗ್ರಾ. ಪಂ ಹಾಗೂ ಅ ಮಕ್ಕಳು ಹೋಗುವ ಶಾಲೆಯ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡ ಘಟನೆ ಅ 25 ರಂದು ನಡೆದಿದೆ.
ಸುಳ್ಯ ತಾಲೂಕಿನ ಬೆಳ್ತಾರೆ ಗ್ರಾಮದ ಮೂಡಾಯಿ ತೋಟ ಸಂಪರ್ಕ ರಸ್ತೆಯ ಮಂಡೇಪುವಿನಲ್ಲಿ ಕೆಸರು ತುಂಬಿ ರಸ್ತೆ ಸಂಚಾರ ದುಸ್ತರವಾಗಿತ್ತು. ಸೋಮವಾರದಿಂದ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆಗಳು ಸರಿ ಸುಮಾರು ಒಂದೂವರೆ ವರ್ಷದ ವಿರಾಮದ ಬಳಿಕ ಮತ್ತೆ ಆರಂಭಗೊಂಡಿತ್ತು.

ಈ ಹಿನ್ನಲೆಯಲ್ಲಿ ಆ ರಸ್ತೆಯಲ್ಲಿ ಶಾಲೆಗೆ ತೆರಳುವ ಕೇಶವ ಹಾಗೂ ಸಂತೋಚ್ ಎಂಬವರ ಎರಡನೇ ತರಗತಿಯ ಮಕ್ಕಳಾದ ವಲ್ಲೀಶರಾಮ ಹಾಗೂ ತನ್ವಿ ಎಂಬಿಬ್ಬರು ತಾವೇ ಸ್ವತ: ಹಾರೆ ಹಿಡಿದು ರಸ್ತೆಯಲ್ಲಿ ತುಂಬಿರುವ ಕೆಸರನ್ನು ಬದಿಗೆ ಸರಿಸಿ ಗುಂಡಿಯಲ್ಲಿ ತುಂಬಿಕೊಂಡಿದ್ದ ನೀರನ್ನು ಹೊರಗೆ ಬಿಡುವ ಪ್ರಯತ್ನ ಮಾಡಿದ್ದಾರೆ. ಈ ರಸ್ತೆಯಲ್ಲಿ ನಡೆದುಕೊಂಡು ಶಾಲೆಗೆ ಹೋಗುವ ಸಂದರ್ಭ ಕೈ, ಕಾಲು , ಚಪ್ಪಲಿ ಹಾಗೂ ಬಟ್ಟೆಗಳಲ್ಲಿ ಕೆಸರು ತುಂಬಿ ಗಲೀಜು ಅಗುತ್ತಾದೆ ಎಂಬ ಅತಂಕದಿಂದ ಈ ಪುಟ್ಟ ಮಕ್ಕಳು ಇಂತಹ ದೊಡ್ದ ಸಾಹಸ ಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ನ್ಯಾಯಾದೀಶರ ಭೇಟಿ

ಈ ವಿಚಾರ ಸಾಮಾಜಿಕ ಮಾಧ್ಯಮ ಹಾಗೂ ಇತರೆ ಮಾಧ್ಯಮ ಗಳಲ್ಲಿ ದೊಡ್ಡ ಸುದ್ದಿಯಾಗುತ್ತಲೇ ದುರಸ್ತಿ ನಡೆಸಿದ ಸ್ಥಳಕ್ಕೆ ಸೋಮ ವಾರ ಸುಳ್ಯದ ಹಿರಿಯ ಸಿವಿಲ್ ನ್ಯಾಯಾಲಯನ್ಯಾಯಾಧೀಶ ಸೋಮ ಶೇಖರ್ ಅವರು ಎಪಿಪಿ ಮತ್ತು ಬೆಳ್ಳಾರೆ ಎಸ್ ಐ ಜತೆಗೆ ಭೇಟಿ ನೀಡಿದರು. ಸ್ಥಳ ಪರಿಶೀಲನೆ ನಡೆಸಿದ ಅವರು ತತ್ ಕ್ಷಣ ಕ್ರಮ ಕೈಗೊಳ್ಳುವಂತೆ ಸ್ಥಳೀಯಾಡಳಿತಕ್ಕೆ ಸೂಚನೆ ನೀಡಿದ್ದಾರೆ,
ಪೋಷಕರಿಂದ ಮಾಹಿತಿ ಕೇಳಿದಾಗ, ಇದು ನಮ್ಮದೇ ರಸ್ತೆಯಾಗಿರುವುದರಿಂದ ಪಂಚಾಯತ್ ಗೆ ಮನವಿ ನೀಡಿದ್ದರೂ ಅವರು ಮಾಡದಿರುವ ಕಾರಣ ನಾವು ಶ್ರಮದಾನ ಮಾಡಿದೆವು. ಆಗ ಮಕ್ಕಳು ಭಾಗಿಯಾಗಿದ್ದಾರೆ ಎಂದರು. ಬಳಿಕ ಗ್ರಾ.ಪಂ.ಗೆ ಭೇಟಿ ನೀಡಿದ ನ್ಯಾಯಾಧೀಶರು ಅಧ್ಯಕ್ಷರು ಮತ್ತು ಪಿಡಿಒ ಅವರನ್ನು ಪ್ರಶ್ನಿಸಿದದ್ದಾರೆ. ಬೆಳ್ಳಾರೆ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳಿಂದ ಕೆಲಸ ಮಾಡಿಸಿದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಕೇಸ್ ದಾಖಲಿಸುವ ಎಚ್ಚರಿಕೆ

ಮಕ್ಕಳಿಗೆ ಹಾರೆ ನೀಡಿ ಕೆಲಸ ಮಾಡಿಸಿದ ಪೋಷಕರ ಮೇಲೆ, ರಸ್ತೆ ದುರಸ್ತಿ ಮಾಡಿಸದ ಪಂಚಾಯತ್, ಸದಸ್ಯ, ಅಧ್ಯಕ್ಷ ಮತ್ತು ಪಿಡಿಒ ಮೇಲೆ ಹಾಗೂ ಮಕ್ಕಳ ಬಗ್ಗೆ ನಿಗಾ ವಹಿಸದ ಶಾಲಾ ಶಿಕ್ಷಕರ ಮೇಲೆ ಎಫ್‌ಐಆರ್ ದಾಖಲಿಸುವಂತೆ ಸೂಚಿಸಿದರು. ಬಳಿಕ ಎಸ್‌ಐ ಅಂಜನೇಯ ರೆಡ್ಡಿ ಅವರು ಪ್ರಕರಣ ದಾಖಲಿಸುವ ಬದಲು ರಸ್ತೆ ದುರಸ್ತಿ ಮಾಡೋಣ ಎಂದಾಗ ನ್ಯಾಯಾಧೀಶರು ಒಪ್ಪಿ ದುರಸ್ತಿಯ ಬಳಿಕ ವರದಿ ನೀಡುವಂತೆ ಸೂಚಿಸಿದರು.ಕ
ಗ್ರಾ.ಪಂ. ಸ್ಪಂದನೆ :
ಮಕ್ಕಳು ರಸ್ತೆ ದುರಸ್ತಿಗೆ ಮುಂದಾದ ಬೆನ್ನಲ್ಲೇ ಬೆಳ್ಳಾರೆ ಗ್ರಾ.ಪಂ. ಸ್ಪಂದಿಸಿದೆ. ಇದನ್ನು ಗಮನಿಸಿದ ಜಿ.ಪಂ. ಸಿಇಒ ತಾ.ಪಂ. ಇಒಗೆ ತತ್‌ಕ್ಷಣ ಸಂದಿಸುವಂತೆ ಸೂಚನೆ ನೀಡಿದರು. ಇಒ ಭವಾನಿಶಂಕರ ಅವರು ಬೆಳ್ಳಾರೆ ಪಿಡಿಒ ಅವರನ್ನು ಸಂಪರ್ಕಿಸಿ ನಿರ್ದೆಶನ ನೀಡಿದ ಮೇರೆಗೆ ಪಿಡಿಒ ಅನುಷಾ ಮತ್ತು ಸಿಬಂದಿ ಸ್ಥಳಕ್ಕೆ ಭೇಟಿ ನೀಡಿ ತಾತ್ಕಾಲಿಕವಾಗಿ ರಸ್ತೆ ದುರಸ್ತಿಗೆ ಮುಂದಾಗಿದ್ದಾರೆ.