ಬೆಂಗಳೂರು: ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ದಕ್ಷಿಣ ಕನ್ನಡದ ಹವ್ಯಕರ ಸಂಬಂಧ ಬೆಳೆಸಿದ್ದಾರೆ. ಖರ್ಗೆ ಮೊಮ್ಮಗಳ ವಿವಾಹ ಸಮಾರಂಭ ಅ.25ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿದ್ದು, ಈ ಮೂಲಕ ಖರ್ಗೆ ದ.ಕ ಜಿಲ್ಲೆಯ ಹವ್ಯಕ ಬ್ರಾಹ್ಮಣರ ಮನೆಯ ಬೀಗರಾಗಿದ್ದಾರೆ.
ಖರ್ಗೆ ಅವರ ಪುತ್ರಿ ಜಯಶ್ರೀ ಮತ್ತು ರಾಧಾಕೃಷ್ಣ ದಂಪತಿಯ ಮಗಳು ಪ್ರಾರ್ಥನಾ ಅವರ ವಿವಾಹವು ಬಂಟ್ವಾಳ ತಾಲೂಕಿನ ವೀರಕೆಂಬ ಗ್ರಾಮದ ಗಿಲ್ಕಿಂಜದ ತಿರುಮಲೇಶ್ವರ ಭಟ್ಟ ಅವರ ಮೊಮ್ಮಗ, ಶಾರದಾ ಮತ್ತು ಜಯಗೋವಿಂದ್ ಅವರ ಸಹೋದರ ಎ.ಟಿ.ಹರಿಶಂಕರ ಮತ್ತು ವಿಜಯಲಕ್ಷ್ಮಿ ದಂಪತಿಯ ಪುತ್ರ ಪಾಣಿನಿ ಅವರ ಜತೆ ಜರುಗಿದೆ.
ದಲಿತ ಸಮುದಾಯಕ್ಕೆ ಸೇರಿದ ಖರ್ಗೆ ಕುಟುಂಬದ ಜತೆಗೆ ಹವ್ಯಕ ಬ್ರಾಹ್ಮಣ ಸಮುದಾಯದ ಕುಟುಂಬದ ಸಂಬಂಧ ಬೆಳೆಸಲಾಗಿದೆ. ಪ್ರಾರ್ಥನಾ ಮತ್ತು ಪಾಣಿನಿ ಒಂದೇ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪರಸ್ಪರ ಪ್ರೀತಿಸುತ್ತಿದ್ದರು.

ಈ ವಿಷಯವನ್ನು ಎರಡೂ ಕುಟುಂಬಗಳಿಗೆ ತಿಳಿಸಿ, ಒಪ್ಪಿಸಿದ್ದಾರೆ. ಈ ಎರಡೂ ಕುಟುಂಬದ ಜಾತಿ ಬೇರೆ ಬೇರೆಯಾಗಿದ್ದರೂ ಪರಸರರು ಮದುವೆಗೆ ಒಪ್ಪಿಗೆ ನೀಡಿ, ಮದುವೆ ಮಾಡಿರುವುದು ಸಾಮಾಜಿಕ ಮನ್ನಣೆಗಳಿಸಿದೆ.
ಮದುವೆ ಸಮಾರಂಭದಲ್ಲಿ ಮಾಜಿ ಸಿಎಂ ವೀರಪ್ಪ ಮೊಯ್ಲಿ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಡಾ.ಜಿ.ಪರಮೇಶ್ವರ, ರಮಾನಾಥ ರೈ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.



