ವಿಟ್ಲ: ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಅ .26 ರಂದು ಒಂದೇ ದಿನ ಎರಡು ಸರಗಳ್ಳತನ ಪ್ರಕರಣಗಳು ನಡೆದ ಬಗ್ಗೆ ವರದಿಯಾಗಿದೆ.
ಈ ಎರಡು ಪ್ರಕರಣಗಳಲ್ಲಿಯೂ ದುಷ್ಕರ್ಮಿಗಳು ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದು ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಅ . 26 ರಂದು ಮಧ್ಯಾಹ್ನದ ವೇಳೆ ಉಕ್ಕುಡ – ಪುಣಚ ರಸ್ತೆಯಿಂದ ಗುಂಪಲಡ್ಕ ಸಂಪರ್ಕ ಕಲ್ಪಿಸುವ ಒಳ ರಸ್ತೆಯಲ್ಲಿ ಮಹಿಳೆಯ ಸರ ಎಗರಿಸಿ ಪಲಾಯನ ಮಾಡಲಾಗಿದೆ.
ಸಂಜೆ ಉಕ್ಕುಡ ಕನ್ಯಾನ ರಸ್ತೆಯ ದೇಲಂತಬೆಟ್ಟು ಸಮೀಪ ಬೈಕ್ ನಲ್ಲಿ ಬಂದ ದುಷ್ಕರ್ಮಿಯೂ ಚೈನ್ ಎಳೆದು ಪರಾರಿಯಾಗಿದ್ದಾನೆ.
ಕಳ್ಳನೂ ಕನ್ಯಾನ ಕಡೆಗೆ ಪಲಾಯನ ಮಾಡುವ ಸಂದರ್ಭ ಕನ್ಯಾನ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಬೈಕ್ ನಿಲ್ಲಿಸಲು
ಸೂಚನೆ ನೀಡಿದರೂ ಆತ ನಿಲ್ಲಿಸದೆ ಪಲಾಯನ ಮಾಡಿದ್ದಾನೆ.
ಪೊಲೀಸರು ಸ್ಥಳೀಯ ಯುವಕರಿಗೆ ಮಾಹಿತಿ ನೀಡಿ ಅವರು ಬೈಕ್ ನಲ್ಲಿ ಬೆನ್ನಟ್ಡಿ ಕಳ್ಳನ ದ್ವಿಚಕ್ರವಾಹನವನ್ನು ಅಡ್ಡ ಹಾಕಿದ್ದಾರೆ.
ಈ ಸಂದರ್ಭ ಆತ ತನ್ನ ದ್ವಿಚಕ್ರವಾಹನದಿಂದ ಹಾರಿ ಕಾಡಿನಲ್ಲಿ ಪಲಾಯನ ಮಾಡಿದ್ದಾನೆ. ಏಕ ವ್ಯಕ್ತಿಯಿಂದ ಈ ಕೃತ್ಯ ನಡೆದಿದ್ದು, ಸ್ಥಳೀಯ ನಿವಾಸಿಗಳು ಪಲಾಯನ ಮಾಡಿದ ಭಾಗದಲ್ಲಿ ನಾಕಾ ಬಂಧಿ ರಚಿಸಿ ಕಳ್ಳನಿಗಾಗಿ ಹುಡುಕಾಟ ಮಾಡುತ್ತಿದ್ದಾರೆ.