ಕೊಡಗು: ಮಡಿಕೇರಿ ಪ್ರವಾಸಕ್ಕೆಂದು ಬಂದಿದ್ದ ಐವರು ಗೆಳೆತಿಯರ ಪೈಕಿ ಓರ್ವ ಯುವತಿ ಹೋಂಸ್ಟೇನಲ್ಲಿ ಅನುಮಾನಸ್ಪದವಾಗಿ ಮೃತಪಟ್ಟಿದ್ದಾಳೆ.
ವಿಘ್ನೇಶ್ವರಿ ಈಶ್ವರ್ (24) ಮೃತೆ. ಬಳ್ಳಾರಿ ಮೂಲದ ಈಕೆ ಮುಂಬೈನಲ್ಲಿ ಉದ್ಯೋಗದಲ್ಲಿದ್ದಳು. ಇತ್ತೀಚಿಗೆ ಗೆಳೆತಿಯರೊಂದಿಗೆ ರಾಜ್ಯಕ್ಕೆ ಬಂದಿದ್ದ ಈಶ್ವರಿ, 5 ದಿನದ ಪ್ರವಾಸಕ್ಕೆಂದು ಸ್ನೇಹಿತೆಯರೊಂದಿಗೆ ಮಡಿಕೇರಿಗೆ ಬಂದಿದ್ದಳು.
ಎರಡು ದಿನ ಕೊಡಗಿನ ಸುತ್ತಮುತ್ತಾ ಪ್ರವಾಸಿ ಕೇಂದ್ರಗಳಿಗೆ ಓಡಾಡಿದ್ದ ಸ್ನೇಹಿತರು ಮಡಿಕೇರಿಯ ಹೋಂ ಸ್ಟೇನಲ್ಲಿ ತಂಗಿದ್ದರು. ಮೂರನೇ ದಿನವಾದ ಭಾನುವಾರ ರಾತ್ರಿ ಈಶ್ವರಿ ಮೃತಪಟ್ಟಿದ್ದಾಳೆ.
ಭಾನುವಾರ ರಾತ್ರಿ ಸ್ನಾನಕ್ಕೆಂದು ಹೋಗಿದ್ದ ವಿಘ್ನೇಶ್ವರಿ ಬಾತ್ ರೂಮಿನಲ್ಲೇ ಮೃತಪಟ್ಟಿದ್ದು, ಘಟನೆ ನಡೆಯುತ್ತಿದ್ದಂತೆ ಹೋಂಸ್ಟೇ ಮಾಲೀಕರಿಗೆ ಉಳಿದ ಯುವತಿಯರು ಮಾಹಿತಿ ನೀಡಿದ್ದಾರೆ. ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾವಿಗೆ ನಿಖರವಾದ ಕಾರಣ ಲಭ್ಯವಾಗಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಗೊತ್ತಾಗಲಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.