ಬಾಗಲಕೋಟೆ : ಟಿ -20 ಕ್ರಿಕೆಟ್ ವಿಶ್ವಕಪ್ ನ ಸೂಪರ್ -12 ವಿಭಾಗದ ಪಂದ್ಯಗಳು ಇಂದಿನಿಂದ ಆರಂಭಗೊಳ್ಳುತ್ತಿದೆ. ನಾಳೆ (ಅಕ್ಟೋಬರ್ 24ರಂದು) ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವೆ ಪಂದ್ಯಾಟ ನಡೆಯಲಿದೆ. ಆದರೇ ಈ ಪಂದ್ಯದ ಬಗ್ಗೆ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ಸ್ವಾಮೀಜಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕ್ರೀಡೆಯನ್ನು ಕ್ರೀಡೆಯನ್ನಾಗಿ ಸ್ವೀಕರಿಸಬೇಕು ಎನ್ನುವುದು ವಾಸ್ತವ. ಆದರೆ, ವಾಸ್ತವ ಎಲ್ಲವೂ ಸತ್ಯ ಆಗುತ್ತೋ? ಎಂದು ಪ್ರಶ್ನಿಸಿದರು. ಪಾಕಿಸ್ತಾನದ ಒಬ್ಬ ವ್ಯಾಪಾರಿ ಭಾರತದ ವಿರುದ್ಧ ಗೆದ್ದರೆ ಬ್ಲಾಂಕ್ ಚೆಕ್ ಕೊಡುವುದಾಗಿ ಹೇಳಿದ್ದಾನಂತೆ. ಆ ದೇಶ ಕ್ರಿಕೆಟ್ ಅನ್ನು ಹಾಗೆಯೇ ಸ್ವೀಕರಿಸಿದೆ. ಇದೊಂದು ಯುದ್ಧ ಅಂತಾ ಹೇಳಿಕೊಂಡು ಓಡಾಡುತ್ತಿವೆ. ಇಂತಹ ಸ್ಥಿತಿಯಲ್ಲಿ ಆಟ ಆಡುವುದಕ್ಕೆ ಅರ್ಥವಿದೆಯೇ ಎಂದು ಅವರು ಕೇಳಿದ್ದಾರೆ
ಕ್ರೀಡೆಯನ್ನು ಕ್ರೀಡೆಯನ್ನಾಗಿ ನೋಡುವ ಸಮಾಜವನ್ನುನಾವು ರೂಪಿಸಿದ್ದೇವಾ? ದೋಂಬಿ, ಗಲಾಟೆ, ಗದ್ದಲ ಆಯಿತು ಎಂದ್ರೆ ಶಮನ ಮಾಡಲು ಯಾರಿಂದಲೂ ಆಗಲ್ಲ. ಸಾವು, ನೋವು ಆದ ಮೇಲೆ ಯಾರಿಗೆ ಉಪದೇಶ ಕೊಡಬೇಕು? ಕ್ರೀಡೆಯನ್ನ ಕ್ರೀಡೆಯಾಗಿ ಸ್ವೀಕರಿಸುವ ಗುಣ ಕ್ರೀಡಾಳುಗಳಲ್ಲೆ ಎಷ್ಟರ ಮಟ್ಟಿಗೆ ಇದೆ? ಕ್ರೀಡಾಂಗಣದಲ್ಲೇ ಹೊಡೆದಾಡಿಕೊಳ್ಳುವುದು, ಬೈದಾಡುವುದು ಹಾಗೂ ಅಸಭ್ಯವಾಗಿ ವರ್ತಿಸುವುದು ಯಾರು? ಕ್ರೀಡಾಳುಗಳಲ್ಲೆ ಇಷ್ಟರ ಮಟ್ಟಿಗೆ ಇದೆ ಅಂದರೆ, ಹೊರಗೆ ಇರುವುದರಲ್ಲಿ ಅಚ್ಚರಿಯಿಲ್ಲ ಅಂದರು.

ಸಮಾಜವು ಪರಸ್ಪರ ದೊಂಬಿ, ಗಲಾಟೆಗೆ ಇಳಿದರೆ, ಅದರಿಂದಾಗುವ ಹಾನಿಗೆ ಪರಿಹಾರ ಹಾಗೂ ನಿವಾರಣೆ ಹೇಗೆ ಸಾಧ್ಯ? ನಮ್ಮಲ್ಲಿ ಸಹ ಅಲ್ಲಲ್ಲಿ ಯುವಕರ ಗುಂಪುಗಳು ಸೋಲು-ಗೆಲುವನ್ನು ಸ್ವೀಕರಿಸುವ ಪರಿ ಹೇಗಿದೆ? ಪರಸ್ಪರ ಹೊಡೆದಾಟ, ನಿಂದನೆ ಆಗ್ತಿವೆ. ಕ್ರೀಡೆಯನ್ನು ಕ್ರೀಡೆಯಾಗಿ ಸ್ವೀಕರಿಸುವ ಮನೋಭಾವ ಕ್ರೀಡಾಪಟುಗಳು, ಪ್ರಜೆಗಳು, ಸಮಾಜದಲ್ಲಿ ಇದೆಯೇ? ಇಷ್ಟು ವಿಕೋಪಕ್ಕೆ ಹೋಗುತ್ತೆ ಅಂದ್ರೆ, ಅದರ(ಭಾರತ-ಪಾಕ್ ಮ್ಯಾಚ್) ಅಗತ್ಯ ಉಂಟೋ? ಇಲ್ವೋ? ಪರಿಶೀಲನೆ ಮಾಡಲಿ ಎನ್ನುವುದು ನಮ್ಮ ಅಭಿಪ್ರಾಯವಾಗಿದೆ ಎಂದರು.
