ಎರಡು ತಿಂಗಳ ಹಿಂದೆ ಪುತ್ತೂರು ತಾಲೂಕಿನ ಬನ್ನೂರು ಎಂಬಲ್ಲಿ ಕುಟುಂಬವೊಂದಕ್ಕೆ ತಂಡವೊಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿ ಮಾನಭಂಗಕ್ಕೆ ಯತ್ನಿಸಿದ ಬಗ್ಗೆ ವ್ಯಕ್ತಿಯೊಬ್ಬರು ಪುತ್ತೂರು ನ್ಯಾಯಾಲಯಕ್ಕೆ ಸಲ್ಲಿಸಿದ ಖಾಸಗಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಕರಣದ ತನಿಖೆ ನಡೆಸುವಂತೆ ಪುತ್ತೂರು ನಗರ ಪೊಲೀಸರಿಗೆ ಸೂಚಿಸಿದೆ.
ಬನ್ನೂರಿನ ನೀಪಾಣಿ ನಿವಾಸಿ ಕೃಷ್ಣಪ್ಪ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದವರು. ಕೃತ್ಯವೂ ಅ 23 ರಂದು ರಾತ್ರಿ 8 ಗಂಟೆಗೆ ನಡೆದಿದೆ ಎಂದು ಆರೋಪಿಸಲಾಗಿದೆ. ಪ್ರಶಾಂತ್, ಮಹೇಶ, ಜಗದೀಶ ಮತ್ತು ಸಂತೋಷ್ ಎಂಬ ನಾಲ್ವರು ಆರೋಪಿಗಳ ತಂಡ ಈ ಕುಕ್ರತ್ಯ ಎಸಗಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ
ಏನಿದು ದೂರು
ಕೃಷ್ಣಪ್ಪರವರು ಪತ್ನಿ ಹಾಗೂ ತಾಯಿಯ ಜತೆ ನೀಪಾಣಿಯ ಮನೆಯಲ್ಲಿದ್ದ ವೇಳೆ ಆರೋಪಿಗಳು ಅಲ್ಲಿಗೆ ಆಗಮಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮರದ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಇದನ್ನು ತಡೆಯಲು ಪತ್ನಿ ಮತ್ತು ತಾಯಿಗೆ ಕೈಯಿಂದ ಹಲ್ಲೆ ನಡೆಸಿ, ಪತ್ನಿಯ ಮೈಗೆ ಕೈ ಹಾಕಿ ಮಾನಭಂಗಕ್ಕೆ ಯತ್ನಿಸಿದ್ದಾರೆ ಮತ್ತು ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ಖಾಸಗಿ ದೂರಿನಲ್ಲಿ ವಿವರಿಸಲಾಗಿದೆ̤

ಕೃತ್ಯ ಎಸಗಿದ ಆರೋಪಿಗಳ ವಿರುದ್ದ ಭಾರತೀಯ ದಂಡ ಸಂಹಿತೆಯ ಕಲಂ 323, 324, 352, 354, 503, 504, 506 ಸಹವಾಚ್ಯ ಕಲಂ 34 ರಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರುದಾರರು ತಮ್ಮ ವಕೀಲರ ಮೂಲಕ ಪುತ್ತೂರಿನ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ದೂರು ಸಲ್ಲಿಸಿದಾರೆ.
ದೂರುದಾರರ ಪರ ವಾದ ಆಲಿಸಿದ ಮಾನ್ಯ ನ್ಯಾಯಾಲಯ ಈ ಕುರಿತಂತೆ ತನಿಖೆ ನಡೆಸಲು ಪುತ್ತೂರು ನಗರ ಠಾಣಾಧಿಕಾರಿಗಳಿಗೆ ಆದೇಶಿಸಿದೆ. ದೂರುದಾರರ ಪರ ಚಾಣಕ್ಯ ಲಾ ಚೇಂಬರ್ಸ್ ನ ನ್ಯಾಯವಾದಿಗಳಾದ ಶ್ಯಾಮ್ ಪ್ರಸಾದ್ ಕೈಲಾರ್, ಚೇತನಾ ವಿ.ಎನ್, ವಿಮಲೇಶ್ ಸಿಂಗಾರಕೋಡಿ ಮತ್ತು ಅಂಕಿತ ಶರ್ಮ ವಾದಿಸಿದ್ದರು.