ಕೊಚ್ಚಿ: ಮಹಿಳೆ ಅಥಾವ ಯುವತಿಗೆ ಅತೀವ ಲೈಂಗಿಕ ಆಸಕ್ತಿ ಇತ್ತು ಎಂದಾಕ್ಷಣ ಯಾರೊಬ್ಬರನ್ನೂ ಅತ್ಯಾಚಾರ ಆರೋಪದಿಂದ ಕ್ಷಮಿಸಲಾಗದು, ವಿಶೇಷವಾಗಿ ತಂದೆಯಾದವನನ್ನು. ಆ ತನ್ನ ಮಗಳಿಗೆ ‘ರಕ್ಷಕ ಮತ್ತು ಆಶ್ರಯಧಾತ’ ಎಂದೇ ಪರಿಗಣಿಸಲಾಗಿರುವುದರಿಂದ ಆತನ ಅಪರಾಧವನ್ನು ಮನ್ನಿಸಲಾಗದು ಎಂದು ಕೇರಳ ಹೈಕೋರ್ಟ್ ಹೇಳಿದೆ. ಅಪ್ರಾಪ್ತ ಬಾಲಕಿಗೆ ತಂದೆಯೇ ನಿರಂತರ ಅತ್ಯಾಚಾರ ಎಸಗಿದ ಹಾಗೂ ಆ ಬಾಲಕಿ ಮಗುವಿಗೆ ಜನ್ಮ ನೀಡಿದ ಪ್ರಕರಣದ ತೀರ್ಪು ಪ್ರಕಟಿಸುವ ವೇಳೆ ಕೇರಳ ಹೈ ಕೋರ್ಟು ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಮಗು ಹಾಗೂ ಆರೋಪಿ ತಂದೆಯ ಡಿಎನ್‌ಎ ವಿಶ್ಲೇಷಣೆಯೂ ಸಂತ್ರಸ್ತೆಯ ತಂದೆಯೇ ಶಿಶುವಿನ ಜೈವಿಕ ತಂದೆ ಎಂಬುದನ್ನು ಬಹಿರಂಗಪಡಿಸಿದ ಹಿನ್ನಲೆಯಲ್ಲಿ ಆರೋಪಿ ತಂದೆಯನ್ನು ಅಪರಾಧಿ ಎಂದು ಘೋಷಿಸಿದ ನ್ಯಾಯಮೂರ್ತಿ ಆರ್. ನಾರಾಯಣ ಪಿಶರಡಿ ತೀರ್ಪು ನೀಡಿದ್ದಾರೆ
‘ತನ್ನ ಮಗಳು ಬೇರೊಬ್ಬ ವ್ಯಕ್ತಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿರುವುದಾಗಿ ಒಪ್ಪಿಕೊಂಡಿದ್ದು ಹಾಗಾಗಿ ನಾನು ಮಗ್ದನಾಗಿದ್ದು ನನ್ನನ್ನು ಈ ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಲಾಗಿದೆ. ‘ ಎಂದು ಸಂತ್ರಸ್ತೆಯ ತಂದೆ ನ್ಯಾಯಾಲಯಕ್ಕೆ ಅರ್ಜ ಸಲ್ಲಿಸಿದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು, ‘ಒಬ್ಬ ತಂದೆ ತನ್ನ ಮಗಳ ಮೇಲೆ ಅತ್ಯಾಚಾರ ಮಾಡಿದರೆ, ರಕ್ಷಕನೇ ಭಕ್ಷಕನಾದ, ಖಜಾನೆ ಕಾವಲುಗಾರನೇ ದರೋಡೆಕೋರನಾಗುವುದಕ್ಕಿಂತಲೂ ಕೆಟ್ಟದು. ತಂದೆಯಾದವನು ತನ್ನ ಸ್ವಂತ ಮಗಳ ಮೇಲೆ ಅತ್ಯಾಚಾರ ಎಸಗುವಷ್ಟು ಘೋರ ಅಪರಾಧ ಇನ್ನೊಂದು ಇರಲಾರದು’ ಎಂದು ಅಭಿಪ್ರಾಯಪಟ್ಟರು.

ಸಂತ್ರಸ್ತೆಯ ಆರೋಪಿ ತಂದೆ ನಾನು ಮುಗ್ಧ ಎಂದು ವಾದಿಸಿರುವುದನ್ನು ತಿರಸ್ಕರಿಸಿದ ನ್ಯಾಯಮೂರ್ತಿಗಳು, ಲೈಂಗಿಕ ದೌರ್ಜನ್ಯದ ಪರಿಣಾಮವಾಗಿ 2013ರ ಮೇನಲ್ಲಿ ಜನಿಸಿದ ಮಗುವಿನ ಡಿಎನ್‌ಎ ವಿಶ್ಲೇಷಣೆಯೂ ಸಂತ್ರಸ್ತೆಯ ತಂದೆಯೇ ಶಿಶುವಿನ ಜೈವಿಕ ತಂದೆ ಎಂಬುದನ್ನು ಬಹಿರಂಗಪಡಿಸಿದೆ ಎಂದು ಹೇಳಿದರು.
ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಆರೋಪಿಗೆ 14 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿ, 12 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದೆ.
2012ರ ಜೂನ್‌ನಿಂದ 2013ರ ಜನವರಿ ನಡುವೆ ಅತ್ಯಾಚಾರ ನಡೆದಾಗ ಸಂತ್ರಸ್ತೆ ಅಪ್ರಾಪ್ತ ವಯಸ್ಕಳು ಮತ್ತು ಸಂತ್ರಸ್ತೆಗೆ ತಂದೆಯಿಂದ ಬೆದರಿಕೆ ಇದೆ ಎನ್ನುವುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ಗೆ ಸಾಧ್ಯವಾಗಲಿಲ್ಲ. ಹಾಗಾಗಿ ವಿಚಾರಣಾ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ಹೈಕೋರ್ಟ್ ಕೈಬಿಟ್ಟಿದೆ.