ಕೊಡಗು: ತುಳುನಾಡ ಲಕ್ಷಾಂತರ ಜನರ ಆರಾಧ್ಯ ದೈವ ಕೊರಗಜ್ಜ. ಇಲ್ಲಿಯ ಜನರಿಗೆ ಯಾವುದೇ ಸಮಸ್ಯೆ ಎದುರಾದರೂ ಮೊದಲು ಹರಕೆ ಹೊತ್ತುಕೊಳ್ಳುವುದು ಕೊರಗಜ್ಜನಿಗೆ. ಇದೀಗ ಕೊರಗಜ್ಜನ ಕಾರಣಿಕ ಕೊಡಗು ನಾಡಿನಲ್ಲೂ ಕಂಡಿದೆ.
ಕೊಡಗಿನ ವ್ಯಕ್ತಿಯೋರ್ವ ಕೊರಗಜ್ಜನ ಹರಕೆಯ ಪ್ರಸಾದ ಕದ್ದಿದ್ದು ಆತನಿಗೆ ಅಜ್ಜನ ಶಾಪ ತಟ್ಟಿ ಕಣ್ಣಿನ ಸಮಸ್ಯೆ ಎದುರಾಗಿದೆ ಎನ್ನಲಾಗಿದೆ.
ಮಡಿಕೇರಿ ತಾಲೂಕಿನ ಸುಂಟಿಕೊಪ್ಪ ಸಮೀಪದ ಕೆದಕಲ್ ಗ್ರಾಮದಲ್ಲಿ ಈ ಘಟನೆ ವರದಿಯಾಗಿದ್ದು ಈ ಘಟನೆ ಸಾರ್ವಜನಿಕರಲ್ಲಿ ಅಚ್ಚರಿ ಮೂಡಲು ಕಾರಣವಾಗಿದೆ.
ಭಕ್ತರು ತಾವು ಹೇಳಿದ ಹರಕೆ ತೀರಿಸುವಾಗ ಕೊರಗಜ್ಜ ಕಟ್ಟೆಗೆ ಮದ್ಯದ ಬಾಟಲಿ ಹಾಗೂ ಚಕ್ಕುಲಿ ಇಡುತ್ತಾರೆ.
ವ್ಯಕ್ತಿಯೋರ್ವ ಕೆಲ ದಿನಗಳ ಹಿಂದೆ ಕೊರಗಜ್ಜ ದೇವಸ್ಥಾನದಿಂದ ಎರಡು ಮದ್ಯದ (ಪ್ರಸಾದ) ಪ್ಯಾಕೆಟ್ ಗಳನ್ನು ಕದ್ದಿದ್ದ ಎಂದು ಹೇಳಲಾಗಿದೆ. ಆತ ಮದ್ಯದ ಪ್ಯಾಕೇಟ್ ಕದಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ವಿಡಿಯೋ:
ಇನ್ನು ಕಳ್ಳನ ಕೈಚಳಕ ದೇವಸ್ಥಾನದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಪ್ರಸಾದ ಕದ್ದವನು ಶರಣಾಗುವಂತೆ ಕೋರಿ ಅರ್ಚಕ ಉಮೇಶ್ ದೇವಸ್ಥಾನಕ್ಕೆ ಹರಕೆ ಕಟ್ಟಿದ್ದಾರೆ.
ಹರಕೆ ಕಟ್ಟಿ ಎರಡೇ ದಿನದಲ್ಲಿ ಮದ್ಯ ಕದ್ದಾತನ ಕಣ್ಣಿಗೆ ಹಾನಿಯುಂಟಾಗಿದ್ದು ಕಣ್ಣಿನ ಸಮಸ್ಯೆ ಎದುರಾಗಿದೆ. ಆ ಬಳಿಕ ಕೊರಗಜ್ಜನ ಬಳಿ ಬಂದು ಹರಕೆ ಸಲ್ಲಿಸಿ ಕ್ಷಮಾಪಣೆ ಕೇಳಿದ್ದಾನೆ. ಆ ನಂತರ ಕಣ್ಣು ದಿನದಿಂದ ದಿನಕ್ಕೆ ಸುಧಾರಣೆಯಾಗುತ್ತಿದ್ದು ಕೊರಗಜ್ಜನ ಪವಾಡಕ್ಕೆ ಭಕ್ತಾದಿಗಳು ಮೂಕವಿಸ್ಮಿತರಾಗಿದ್ದಾರೆ.
ತುಳುನಾಡಿನಲ್ಲಿ ಕಾರಣಿಕ ಮೆರೆದ ಕೊರಗಜ್ಜ ದೈವಶಕ್ತಿ ಇದೀಗ ದಕ್ಷಿಣ ಕಾಶ್ಮೀರ ಎಂದೇ ಪ್ರಖ್ಯಾತಿ ಪಡೆದ ಕೊಡವರ ನಾಡು ಕೊಡಗಿನಲ್ಲೂ ತನ್ನ ಶಕ್ತಿಯನ್ನು ತೋರಿಸಿಕೊಟ್ಟಿದೆ.