ಮಂಗಳೂರು: ಅ 22 : ತನ್ನ ಕಚೇರಿಗೆ ತರಬೇತಿಗೆಂದು ಬರುತ್ತಿದ್ದ ಕಾನೂನು ಪದವಿ ವಿದ್ಯಾರ್ಥಿನಿಗೆ ಮಂಗಳೂರಿನ ಪ್ರತಿಷ್ಠಿತ ವಕೀಲರಾದ ಕೆ.ಎಸ್.ಎನ್. ರಾಜೇಶ್ ಭಟ್ ರವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಪ್ರಕರಣ ದಾಖಲಾಗಿದ್ದು , ಸಂತ್ರಸ್ತೆ ದೂರು ನೀಡಲು ಬಂದ ಸಂದರ್ಭ ಲೋಪಗಳು ನಡೆದಿದೆ ಎಂಬ ಆರೋಪಗಳಡಿಯಲ್ಲಿ ಉರ್ವ ಪೊಲೀಸ್ ಠಾಣೆ ಪಿಎಸ್ಐ ಶ್ರೀಕಲಾ ಮತ್ತು ಮುಖ್ಯಪೇದೆ ಪ್ರಮೋದ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ರಾಜೇಶ್ ಭಟ್ ವಿರುದ್ದ ಪ್ರಕರಣ ದಾಖಲಿಸದಂತೆ ಸಂತ್ರಸ್ತೆಯ ಸ್ನೇಹಿತೆಗೆ ಬೆದರಿಕೆ ಹಾಕಿದ್ದ ಆರೋಪದಡಿ ಪವಿತ್ರಾ ಆಚಾರ್ಯ ಎಂಬುವರನ್ನ ಪೊಲೀಸರು ಬಂಧಿಸಿದ್ದಾರೆ. ಕಾನೂನು ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ವಿಚಾರವಾಗಿ ಒಟ್ಟು ಎರಡು FIR ದಾಖಲಾಗಿತ್ತು. ಮೊದಲ ಪ್ರಕರಣ ಅತ್ಯಾಚಾರ ಯತ್ನ, ಇನ್ನೊಂದು ಪ್ರಕರಣ ವಿಚಾರ ಬಹಿರಂಗ ಪಡಿಸದಂತೆ ಸಂತ್ರಸ್ತೆಯ ಸ್ನೇಹಿತೆಗೆ ಬೆದರಿಕೆ ಹಾಕಿರುವುದು
ಲೋಕಾಯುಕ್ತ ಮತ್ತು ಎಸಿಬಿ ವಿಶೇಷ ವಕೀಲರಾದ ಕೆ.ಎಸ್.ಎನ್. ರಾಜೇಶ್ ಭಟ್ ವಿರುದ್ಧ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಕಾನೂನು ವಿದ್ಯಾರ್ಥಿನಿ ಅತ್ಯಾಚಾರ ಯತ್ನ ದೂರು ದಾಖಲಿಸಿದ್ದರು. ಇಂಟರ್ನ್ಶಿಪ್ ಸಲುವಾಗಿ ಕಚೇರಿಗೆ ತೆರಳಿದ ನನ್ನ ಮೇಲೆ ರಾಜೇಶ್ ಕಚೇರಿಯಲ್ಲೇ ಲೈಂಗಿಕ ಕಿರುಕುಳ ನೀಡಿದ್ದರು. ಖಾಸಗಿ ಅಂಗಗಳನ್ನು ಮುಟ್ಟಿ ಅಸಭ್ಯವಾಗಿದ ವರ್ತಿಸಿದರು ಎಂದು ಸಂತ್ರಸ್ತೆ ರಾಜೇಶ್ ವಿರುದ್ಧ ದೂರು ನೀಡಿದ್ದಾರೆ. ಅಲ್ಲದೇ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ಮೂಲದ ಸಂತ್ರಸ್ತೆಯ ಗೆಳೆಯ ಧ್ರುವ ಹಾಗೂ ಆತನ ತಾಯಿ ಮಹಾಲಕ್ಷ್ಮಿ ಹೆಗ್ಡೆಯನ್ನು ಆರೋಪಿಗೆ ಪ್ರಕರಣ ಮುಚ್ಚಿ ಹಾಕಲು ನೆರವು ನೀಡಿದ ಆರೋಪದಡಿ ಅದೇ FIR ನಲ್ಲಿ ಎರಡನೇ ಹಾಗೂ ಮೂರನೇ ಆರೋಪಿಯಾಗಿ ಹೆಸರಿಸಲಾಗಿದೆ.

ಪ್ರಕರಣ ತಿರುಚಲು ಯತ್ನ
ಮಹಿಳಾ ಸಂಘಟನೆಯವರು ಎಂದು ಪರಿಚಯಿಸಿಕೊಂಡು ಕೌನ್ಸಿಲಿಂಗ್ ಹಾಗೂ ಕಾನೂನಿನ ಸಹಾಯ ಮಾಡುತ್ತೇವೆ ಎಂದು ಹೇಳಿ ದಾರಿ ಮದ್ಯೆ ಮೈದಾನಕ್ಕೆ ಕರೆದುಕೊಂಡು ಹೋಗಿ ಬೆದರಿಕೆ ಹಾಕಿ ತಮಗೆ ಬೇಕಾದ ರೀತಿ ಹೇಳಿಕೆ ನೀಡುವಂತೆ ಒತ್ತಡ ಹಾಕಿದ್ದಾರೆ ಬೆದರಿಸಿ ಮುಚ್ಚಳಿಕೆ ಬರೆಸಿದ್ದಾರೆಂದು ಸಂತ್ರಸ್ತೆಯ ಸ್ನೇಹಿತೆ ಮಹಿಳಾ ಪೊಲೀಸರಿಗೆ ದೂರು ನೀಡಿದು ಆ ಪ್ರಕರಣದಲ್ಲಿ ಅಶೋಕ ನಗರದ ಜಾಗೃತ ಮಹಿಳಾ ವೇದಿಕೆಯ ಪವಿತ್ರಾ ಆಚಾರ್ಯರವರನ್ನು ಪೊಲೀಸರು ಬಂಧಿಸಿದ್ದಾರೆ.

ಮಾತುಕತೆಯಲ್ಲಿ ಮುಗಿಸಲು ಹುನ್ನಾರ?
ಲೈಂಗಿಕ ದೌರ್ಜನ್ಯದಂತಹ ಗಂಭೀರ ಪ್ರಕರಣವನ್ನು ಲಘುವಾಗಿ ಪರಿಗಣಿಸಿ ಮಾತುಕತೆಯಲ್ಲಿ ಮುಗಿಸಲು ಪಿಎಸ್ಐ ಶ್ರೀಕಲಾ ಯತ್ನಿಸಿದ್ದರು, ಅಲ್ಲದೆ ದೂರು ಬಂದ ಕೂಡಲೇ ಪ್ರಕರಣ ದಾಖಲು ಮಾಡದೆ ಹಾಗೂ ಮೇಲಧಿಕಾರಿಗಳ ಗಮನಕ್ಕೆ ತಾರದೆ ನಿರ್ಲಕ್ಷ್ಯ ವಹಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಆರೋಪದ ಮೇರೆಗೆ ಪಿಎಸ್ಐ ಶ್ರೀಕಲಾ ಮತ್ತು ಪ್ರಮೋದ್ ಅವರನ್ನ ಅಮಾನತುಗೊಳಿಸಿ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಪುತ್ತೂರಿನಲ್ಲಿ ರಾಜೇಶ್ ಭಟ್ ?
ಪ್ರಕರಣದ ಪ್ರಮುಖ ಆರೋಪಿ ರಾಜೇಶ್ ತಲೆಮರೆಸಿಕೊಂಡಿದ್ದು ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆತ ಪುತ್ತೂರಿನಲ್ಲಿ ಸಂಘಟನೆಯೊಂದರ ಪ್ರಮುಖರ ಮನೆಯಲ್ಲಿ ಅಶ್ರಯ ಪಡೆದಿದ್ದಾರೆ ಎಂಬ ಗುಸು ಗುಸು ಸಾರ್ವಜನಿಕ ವಲಯದಲ್ಲಿ ಹಬ್ಬಿದೆ.