ಪುತ್ತೂರು : ಅ 21 : ಸಂಬಳ ಪಾವತಿಸದೆ ಸತಾಯಿಸುತ್ತಿದ್ದಾರೆಂದು ಆರೋಪಿಸಿ ಕೇಂದ್ರ ಕಛೇರಿಯ ಅಧಿಕಾರಿಗಳ ವಿರುದ್ಧ ಪುತ್ತೂರಿನ ಕೆ.ಎಸ್.ಆರ್.ಟಿ.ಸಿ ನೌಕರರು ಅ.21 ರಿಂದ ಧರಣಿ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ. ಬಿಎಂಎಸ್ ಸಂಘಟನೆಯ ನೇತೃತ್ವದಲ್ಲಿ ಪುತ್ತೂರಿನ ಅಮರ್ ಜವಾನ್ ಜ್ಯೋತಿ ಬಳಿ ಈ ಧರಣಿ ಸತ್ಯಾಗ್ರಹ ನಡೆಯುತ್ತಿದೆ.
ಮುಂದಿನ ನಾಲ್ಕು ದಿನಗಳ ಕಾಲ ನಿರಂತರ ಸತ್ಯಾಗ್ರಹ ನಡೆಸಲು ನಿರ್ಧರಿಸಿರುವ ಸಿಬ್ಬಂದಿ ಗಳು ಅ.25ರ ಒಳಗಡೆ ಬೇಡಿಕೆ ಈಡೇರದಿದ್ದರೇ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲು ಮನ: ಮಾಡಿದ್ದಾರೆ.
ಅಗಸ್ಟ್ ನಲ್ಲಿ ಅರ್ಧ ಸಂಬಳ ನೀಡಿದ್ದು, ಬಳಿಕ ಸಂಬಳವನ್ನೇ ನೀಡಿಲ್ಲ. ಈ ಮೂಲಕ ಕೇಂದ್ರ ಕಛೇರಿಯ ಅಧಿಕಾರಿಗಳು ನೌಕರರ ಬದುಕಿನ ಜತೆ ಚೆಲ್ಲಾಟವಾಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಅಂಗಾರರಿಗೆ, ಕೆ.ಎಸ್.ಆರ್.ಟಿ.ಸಿ ಯ ಉನ್ನತ ಅಧಿಕಾರಿಗಳಿಗೆ ಈ ಬಗ್ಗೆ ಮನವಿ ಮಾಡಲಾಗಿದೆ ಎಂದು ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಿಎಂಎಸ್ ಘಟಕದ ಅಧ್ಯಕ್ಷ ಗಿರಿಶ್ ಮಳಿ ಪ್ರತಿಭಟನೆ ಸಭೆಯಲ್ಲಿ ತಿಳಿಸಿದರು.

ಮನವಿ ನೀಡಿದ ಸಂದರ್ಭ ತಕ್ಷಣ ಸ್ಪಂದಿಸಿದ ಉಸ್ತುವಾರಿ ಸಚಿವರು ಕೂಡಲೇ ಸಂಬಳ ಬಿಡುಗಡ ಮಾಡಿಸುವುದಾಗಿ ಭರವಸೆ ನೀಡಿದ್ದರು. ಆದರೇ ಈವರೆಗೂ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಳಿ ಬೇಸರ ವ್ಯಕ್ತಪಡಿಸಿದರು.
ಇಂದಿನಿಂದ ಅಕ್ಟೋಬರ್ 25 ರ ತನಕ ಸಿಬಂದಿಗಳು ಧರಣಿ ಸತ್ಯಾಗ್ರಹ ನಡೆಸಲಿದ್ದಾರೆ. ಸರಕಾರ ಸಿಬ್ಬಂದಿಗಳ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಅ 25 ರ ಬಳಿಕ ಅಮರಣಾಂತ ಉಪವಾಸ ಧರಣಿ ಆರಂಭಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಸಂಬಳ ನೀಡದೆ ಸತಾಯಿಸುತ್ತಿರುವ ಅಧಿಕಾರಿಗಳ ವಿರುದ್ಧ ವೈಯಕ್ತಿಕ ಕೇಸು ದಾಖಲಿಸಲು ಪುತ್ತೂರು ಬಿಎಂಎಸ್ ನಿರ್ದರಿಸಿದೆ ಎಂದರು.