ವಿಟ್ಲ: ನಿಷ್ಕಲ್ಮಷವಾಗಿ ಮಾಡುವ ಪ್ರತಿಯೊಂದ ಕಾರ್ಯಗಳು ನಮ್ಮನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಸದ್ಗುಣ ಶೀಲರಾಗಿ ಬಾಳುವುದರಲ್ಲಿ ನಿಜವಾದ ಸಾರ್ಥಕತೆಯಿದೆ. ಭಕ್ತಿಮಾರ್ಗಕ್ಕೆ ದೇವರ ಅನುಗ್ರಹ ಶತಸಿದ್ಧ ಎಂದು ಮಾಣಿಲ ಶ್ರೀಧಾಮ ಶ್ರೀಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಅವರು ಸೋಮವಾರ ಮಾಣಿಲ ಶ್ರೀ ಮಹಾಲಕ್ಷ್ಮಿ ಕ್ಷೇತ್ರದಲ್ಲಿ ನಡೆದ 22ನೇ ವರ್ಷದ ಶರನ್ನವ ರಾತ್ರಿ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಆತ್ಮತೃಪ್ತಿಗಿಂತ ಮಿಗಿಲಾದ ಸುಖ ಬೇರೊಂದಿಲ್ಲ. ಸತ್ಕರ್ಮಕ್ಕೆ ಸತ್ಫಲ ಪ್ರಾಪ್ತಿಯಾಗುತ್ತದೆ. ನಿಜವಾದ ಅನ್ಯೋನ್ಯತೆಯಲ್ಲಿ ಆನಂದದ ಅನುಭೂತಿಯಿದೆ. ಸಮರ್ಪಣಾ ಭಾವದ ಭಕ್ತಿಗೆ ಭಗವಂತ ಒಲಿಯುತ್ತಾನೆ. ಸಾತ್ವಿಕರಾಗಿ ಬಾಳಿದಾಗ ಉಸಿರು ಹಾಗೂ ಹೆಸರು ಉಳಿಯುತ್ತದೆ ಎಂದು ತಿಳಿಸಿದರು.
ಯಕ್ಷ ಪ್ರೇಮಿ ಭುಜಬಲಿ ಧರ್ಮಸ್ಥಳ ಮಾತನಾಡಿ ಭಜನಾ ಸಂಪ್ರದಾಯಕ್ಕೆ ಸ್ವಾಮೀಜಿಯವರ ಕೊಡುವೆ ಅಪಾರವಾಗಿದೆ. ಮಕ್ಕಳಿಗೆ ಸುಸಂಸ್ಕೃತ ಸಂಸ್ಕಾರ ನೀಡುವ ಕಾರ್ಯವನ್ನು ಮಾಣಿಲ ಕ್ಷೇತ್ರ ಮಾಡುತ್ತಿದೆ ಎಂದರು.
ಗಣಪತಿ ಹೋಮ, ಪಂಚಾಮೃತಾಭಿಷೇಕ, ಶ್ರೀ ಕುಂಭೇಶ್ವರೀ ಪೂಜೆ, ಕ್ಷೀರಾಭಿಷೇಕ, ಧನ್ವಂತರಿ ಹೋಮ, ಚಂಡಿಕಾ ಹೋಮ, ಪೂಜ್ಯ ಶ್ರೀಗಳವರಿಂದ ಮಧುಕರಿ, ಮಹಾಪೂಜೆ, ಧಾರ್ಮಿಕ ಸಭೆ, ಸ್ವರ್ಣಮಂತ್ರಾಕ್ಷತೆ, ಭಜನಾ ಸಂಕೀರ್ತನೆ, ದೀಪಾರಾಧನೆ, ದುರ್ಗಾನಮಸ್ಕಾರ ಪೂಜೆ, ಲಲಿತಾಸಹಸ್ರನಾಮಾರ್ಚನೆ, ಅಷ್ಟಾವದಾನ ಸೇವೆ, ಮಹಾಪೂಜೆ ನಡೆಯಿತು.

ಮಾಣಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಿತಾ ಅವರನ್ನು ಗೌರವಿಸಲಾಯಿತು. ಕಲ್ಲಡ್ಕ ವಿಠಲ ನಾಯಕ್ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ, ಮಾಣಿಲ ಶ್ರೀ ಮಹಾಲಕ್ಷ್ಮೀ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ ಶ್ರೀಧಾಮ ಕ್ಷೇತ್ರ ಮಹಾತ್ಮೆ ಬಯಲಾಟ ನಡೆಯಿತು.
ಉದ್ಯಮಿಗಳಾದ ಭಾಸ್ಕರ ಶೆಟ್ಟಿ ಪುಣೆ, ಸೌಂದರ್ಯ ರಮೇಶ್ ಬೆಂಗಳೂರು, ರವಿ ಶೆಟ್ಟಿ ಮೂಡಂಬೈಲು ಕತಾರ್, ಶ್ರೀನಿವಾಸ ಸೇಠ್ ಮಂಗಳೂರು, ಪುರುಷೋತ್ತಮ ಶೆಟ್ಟಿ ಮುನಿಯಾಲುಗುತ್ತು, ಡಾ. ಜಿತೇಂದ್ರ ಬೆಂಗಳೂರು, ಹರೀಶ್ ಭಕ್ತ, ಪ್ರವೀಣ್ ನಾಯಕ್ ಮಂಗಳೂರು, ಶ್ರೀಧಾಮ ಮಹಿಳಾ ಸಮಿತಿಯ ಅಧ್ಯಕ್ಷೆ ವನಿತಾ ವಿ. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಟ್ರಸ್ಟಿ ಮಂಜು ವಿಟ್ಲ ಸನ್ಮಾನ ಪತ್ರ ವಾಚಿಸಿದರು. ಟ್ರಸ್ಟಿ ತಾರಾನಾಥ ಆಳ್ವ ಕಾರ್ಯಕ್ರಮ ನಿರೂಪಿಸಿದರು.