ಪುತ್ತೂರು, ಅ. 17: ಉದ್ಯಮಿ ಜಯಂತ್ ನಡುಬೈಲು ಮಾಲಕತ್ವದ ಅಕ್ಷಯ ಗ್ರೂಪ್ ಸಮೂಹ ಸಂಸ್ಥೆಗಳ ಸುಸಜ್ಜಿತ ಅಕ್ಷಯ ಆರ್ಕೇಡ್ ರವಿವಾರ ( ಅ 17) ಕುಂಬ್ರದಲ್ಲಿ ಲೋಕಾರ್ಪಣೆಗೊಂಡಿತು.ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಕಚೇರಿ ಉದ್ಘಾಟಿಸಿದರು,
ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಕುಂಬ್ರ ಜಂಕ್ಷನ್‌ನಲ್ಲಿ ನಿರ್ಮಾಣಗೊಂಡಿರುವ ಸುಂದರ ಹಾಗೂ ಸುಸಜ್ಜಿತ ಅರ್ಕೆಡ್ ವಾಣಿಜ್ಯ ಹಾಗೂ ವಸತಿ ಸಂಕೀರ್ಣವನ್ನು ಹೊಂದಿದೆ. ಅಲ್ಲದೆ 250 ಆಸನಗಳ ಹವಾನಿಯಂತ್ರಿತ ಸಭಾಭವನ, 200 ಆಸನಗಳ ಮಿನಿಹಾಲ್, 1000 ಆಸನ ವ್ಯವಸ್ಥೆಯಿರುವ ಕಲ್ಯಾಣ ಮಂಟಪ ಮತ್ತು ಡೈನಿಂಗ್ ಹಾಲ್ ವ್ಯವಸ್ಥೆಯನ್ನು ಹೊಂದಿದೆ. ಈ ಸಂಕೀರ್ಣವೂ ವಿಶಾಲವಾದ ಪಾರ್ಕಿಂಗ್ ಸೌಕರ್ಯ ಹೊಂದಿದ್ದು,ಇಲ್ಲಿ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ.
ಪುತ್ತೂರಿನ ಬೆಳವಣಿಗೆಗೆ ಪೂರಕವಾಗಿ ನಿರ್ಮಾಣಗೊಂಡಿರುವ ಅಕ್ಷಯ ಆರ್ಕೇಡ್ ಯಶಸ್ಸು ಕಾಣಲಿ ಎಂದು ಸಚಿವ ಕೋಟ ಶುಭ ಹಾರೈಸಿದರು.

ಬೆಂಗಳೂರು ಸೋಲೂರು ಮಠದ ಆರ್ಯ ಮಹಾಸಂಸ್ಥಾನದ ವಿಖ್ಯಾತನಂದ ಸ್ವಾಮೀಜಿಯವರು ನೂತನ ಸಂಕೀರ್ಣ ಉದ್ಘಾಟಿಸಿ ಸ್ವಪ್ರಯತ್ನ ಶ್ರದ್ಧೆಯ ಪ್ರಯತ್ನದಿಂದ ಯಶಸ್ಸು ಸಾಧ್ಯ ಅನ್ನುವುದನ್ನು ಜಯಂತ ನಡುಬೈಲು ಅವರು ತೋರಿಸಿಕೊಟ್ಟಿದ್ದಾರೆ ಎಂದರು.

ವಿಟ್ಲ ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ ಮಾತನಾಡಿ, ಇಚ್ಛಾಶಕ್ತಿ, ಕ್ರಿಯಾ, ಜ್ಞಾನ ಶಕ್ತಿಯಿಂದ ಯಶಸ್ಸು ಸಾಧ್ಯ ಎನ್ನುವುದಕ್ಕೆ ನಡುಬೈಲು ಅವರು ಉದಾಹರಣೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಜಯಂತ ನಡುಬೈಲು ಅವರು ಶಿಕ್ಷಣ, ಧಾರ್ಮಿಕ, ಸಾಮಾಜಿಕ, ಉದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದರು.
ಕುಕ್ಕುಟೋದ್ಯಮದಲ್ಲಿ ಬಾರೀ ಯಶಸ್ವಿ ಗಳಿಸಿರುವ ನೂತನ ಸಂಕೀರ್ಣದ ಮಾಲಕ ಜಯಂತ್ ನಡುಬೈಲು ಅವರು ಪ್ರಾಸ್ತವಿಕವಾಗಿ ಮಾತನಾಡಿ “ ಕೇವಲ ನೂರು ಕೋಳಿಗಳಿಂದ ವ್ಯವಹಾರ ಜೀವನವನ್ನು ಆರಂಭಿಸಿದ ನಾನು ಇಂದು ಒಂದು ಲಕ್ಷಕ್ಕೂ ಮಿಕ್ಕಿ ಕೋಳಿಗಳನ್ನು ಸ್ವತಃ ಉತ್ಪಾದನೆ ಮಾಡುತ್ತಿದ್ದೇನೆ . ಅಲ್ಲದೇ 150 ಕ್ಕೂ ಹೆಚ್ಚು ಕೋಳಿ ಬೆಳೆಗಾರ ರೈತರ ಜತೆ ಇಂಟಿಗ್ರೇಶನ್, ಕಾಂಟ್ರಾಕ್ಟ್ ಮಾಡಿಕೊಂಡು ಕೋಳಿಯನ್ನು ಉತ್ಫಾಧಿಸಲಾಗುತ್ತಿದೆ. ಕೆಲ ವರ್ಷಗಳ ಹಿಂದೆ ಆರಂಭಿಸಿದ ಅಕ್ಷಯ ಗ್ರೂಪ್ ಶಿಕ್ಷಣ ಸಂಸ್ಥೆಯೂ ಜಾಬ್ ಗ್ಯಾರಂಟಿ ವಿಜ್ಞಾನ ಹಾಗೂ ವಾಣಿಜ್ಯ ಕೋರ್ಸ್‌ಗಳನ್ನು ನಡೆಸುತ್ತಿದ್ದೂ ವಿದ್ಯಾರ್ಥಿಗಳ ಹಾಗೂ ಪೋಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಇದೇ ರೀತಿ ಈ ನೂತನ ಅರ್ಕೇಡ್ ಗೂ ಗ್ರಾಹಕರ ಪ್ರೀತಿ ವಿಶ್ವಾಸ ಸಿಗಲಿ ಎಂದು ಹೇಳಿದರು.
ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಕೆದಂಬಾಡಿ ಗ್ರಾ. ಪಂ.ಅಧ್ಯಕ್ಷ ರತನ್, ಒಳಮೊಗ್ರು ಗ್ರಾ.ಪಂ. ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಬ್ರಹಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ತಾಲೂಕು ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಗೆಜ್ಜೆಗಿರಿ ಕ್ಷೇತ್ರದ ಉಪಾಧ್ಯಕ್ಷ ಪೀತಾಂಬರ ಹೆರಾಜೆ, ಸಂಪ್ಯ ಠಾಣೆಯ ಠಾಣಾಧಿಕಾರಿ ಎಂ. ವೈ. ಉದಯರವಿ, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಡಾ| ರಾಜಾರಾಂ ಕೆ.ಬಿ, ಉದ್ಯಮಿ ಕೆ. ಸಿ. ಸಾದಿಕ್, ಪುತ್ತೂರು ರೋಟರಿ ಪೂರ್ವ ಅಧ್ಯಕ್ಷ ಪುರಂದರ ರೈ, ಕುಂಬ್ರ ಶ್ರೀರಾಮ ಭಜನ ಮಂದಿರದ ಅಧ್ಯಕ್ಷ ಬಾಬು ಪೂಜಾರಿ ಬಡಕ್ಕೋಡಿ, ಡಾ| ಯು. ಪಿ.ಶಿವಾನಂದ, ಅಕ್ಷಯ ಗ್ರೂಪ್‌ನ ಕಲಾವತಿ ಜಯಂತ್ ಉಪಸ್ಥಿತರಿದ್ದರು.
ಈ ಸಂದರ್ಭ ಉದ್ಯಮಿ ಸಂತೋಷ್ ಕುಮಾರ್ ಕೊಟ್ಟಿಂಜ ಅವರನ್ನು ಸಮ್ಮಾನಿಸಲಾಯಿತು. ಶಶಿಧರ್ ಕಿನ್ನಿಮಜಲು ಮತ್ತು ಭವ್ಯಶ್ರೀ ಕೋಟ್ಯಾನ್ ನಿರೂಪಿಸಿದರು.

