ಚಂಡೀಗಢ: ಮಾಜಿ ಆಟಗಾರ, ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಅವರನ್ನು ಹರ್ಯಾಣ ಪೊಲೀಸರು ಬಂಧಿಸಿದ್ದಾರೆ. ಬಳಿಕ ಮಧ್ಯಂತರ ಜಾಮೀನಿನ ಮೇಲೆ ಯುವರಾಜ್ ಸಿಂಗ್ ಅವರನ್ನು ಬಿಡುಗಡೆ ಮಾಡಲಾಗಿದೆ.
2020ರಲ್ಲಿ ಲೈವ್ ವಿಡಿಯೋದಲ್ಲಿ ಜಾತಿನಿಂದನೆ ಮಾಡಿದ ಕಾರಣಕ್ಕಾಗಿ ಯುವರಾಜ್ ಸಿಂಗ್ ಅವರನ್ನು ಬಂಧಿಸಲಾಗಿದೆ. 2020ರ ಜೂನ್ ನಲ್ಲಿ ರೋಹಿತ್ ಶರ್ಮಾ ಜೊತೆ ಇನ್ಸ್ಟಾಗ್ರಾಮ್ ಲೈವ್ ವಿಡಿಯೋದಲ್ಲಿ ಯುವರಾಜ್ ಸಿಂಗ್ ಅವರು ಮಾತನಾಡುತ್ತಿದ್ದರು. ಈ ವೇಳೆ ಯುಜುವೇಂದ್ರ ಚಾಹಲ್ ಬಗ್ಗೆ ಮಾತನಾಡುವ ಭರದಲ್ಲಿ ಜಾತಿನಿಂದನೆ ಮಾಡುವಂತಹ ಶಬ್ಧವನ್ನು ಬಳಸಿದ್ದರು. ಬಳಿಕ ಇದು ವಿವಾದವಾದಾಗ ಯುವರಾಜ್ ಕ್ಷಮೆ ಕೇಳಿದ್ದರು.
“ನ್ಯಾಯಾಲಯದ ಆದೇಶದಂತೆ ಯುವರಾಜ್ ಸಿಂಗ್ ಅವರನ್ನು ಬಂಧಿಸಲಾಯಿತು ಮತ್ತು ನಂತರ ಶನಿವಾರ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು” ಎಂದು ಹರಿಯಾಣದ ಹನ್ಸಿಯ ಹಿರಿಯ ಪೊಲೀಸ್ ಅಧಿಕಾರಿ ನಿತಿಕಾ ಗಹ್ಲೌತ್ ತಿಳಿಸಿದರು. ಆದರೆ, ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ರನ್ನು ಬಂಧಿಸಲಾಗಿಲ್ಲ ಎಂದು ಯುವಿ ಅವರ ಪ್ರತಿನಿಧಿ ಶಜ್ಮೀನ್ ಕಾರಾ ಹೇಳಿದ್ದಾರೆ.
ಫೆಬ್ರವರಿಯಲ್ಲಿ ಹರಿಯಾಣದ ದಲಿತ ಕಾರ್ಯಕರ್ತನೊಬ್ಬ ನೀಡಿದ ದೂರಿನ ಮೇರೆಗೆ, ತಾರತಮ್ಯವನ್ನು ನಿಷೇಧಿಸುವ ಉದ್ದೇಶದಿಂದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಆತನನ್ನು ಬಂಧಿಸುವಂತೆ ಕೋರಿತ್ತು. ನ್ಯಾಯಾಲಯದ ಆದೇಶದ ಮೇರೆಗೆ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
“ಅಕ್ಟೋಬರ್ 6 ರಂದು, ಯುವರಾಜ್ ಸಿಂಗ್ ಅವರನ್ನು ತನಿಖೆಗೆ ಒಳಪಡಿಸಲು ಪೊಲೀಸರಿಗೆ ಸೂಚಿಸಲಾಗಿತ್ತು. ನಿನ್ನೆ ಯುವರಾಜ್ ಸಿಂಗ್ ಹಿಸಾರ್ ನಲ್ಲಿ ಪೊಲೀಸರ ಮುಂದೆ ಶರಣಾದರು, ನಂತರ ಆವನನ್ನು ಎರಡು ಮೂರು ಗಂಟೆಗಳ ಕಾಲ ಪ್ರಶ್ನಿಸಲಾಯಿತು ಮತ್ತು ನಂತರ ಬಂಧಿಸಲಾಯಿತು. ನಂತರ ಅವರನ್ನು ಜಾಮೀನು ಬಾಂಡ್ ಗಳಲ್ಲಿ ಬಿಡುಗಡೆ ಮಾಡಲಾಯಿತು” ಎಂದು ಕಾರ್ಯಕರ್ತ ರಜತ್ ಕಲ್ಸನ್ ಹೇಳಿದ್ದಾರೆ.
2020ರ ಜೂನ್ ನಲ್ಲಿ ಕೋವಿಡ್ ಲಾಕ್ ಡೌನ್ ಕಾರಣದಿಂದಾಗಿ ಯುವರಾಜ್ ಸಿಂಗ್ ಅವರು ರೋಹಿತ್ ಶರ್ಮಾ ಜೊತೆ ಇನ್ಸ್ಟಾಗ್ರಾಮ್ ನಲ್ಲಿ ಲೈವ್ ಸಂಭಾಷಣೆ ನಡೆಸಿದ್ದರು. ಈ ವೇಳೆ ಟೀಂ ಇಂಡಿಯಾ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಬಗ್ಗೆ ಮಾತು ಬಂದಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಮಿಂಚುವ ಯುಜಿ ಚಾಹಲ್ ರ ಟಿಕ್ ಟಾಕ್ ವಿಡಿಯೋಗಳಿಗೆ ಯುವಿ ಮತ್ತು ರೋಹಿತ್ ತಮಾಷೆ ಮಾಡಿದ್ದರು.
ಆದರೆ ಮಾತಿನ ಭರದಲ್ಲಿ ಯುವರಾಜ್ ಸಿಂಗ್ ಚಾಹಲ್ ಗೆ ಜಾತಿನಿಂದನೆ ಶಬ್ಧವನ್ನು ಬಳಸಿದ್ದರು. ಈ ಲೈವ್ ಕಾರ್ಯಕ್ರಮ ಮುಗಿದ ಬಳಿಕ ದಲಿತ ಹಕ್ಕು ಕಾರ್ಯಕರ್ತರು ಯುವರಾಜ್ ಸಿಂಗ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.