ಮಂಗಳೂರು, ಅ.17 : ಮಂಗಳೂರಿನಲ್ಲಿ ಮತ್ತೆ ಹಿಂದೂಗಳ ಶ್ರದ್ದಾ ಕೇಂದ್ರದ ಮೇಲೆ ದುಷ್ಕರ್ಮಿಗಳು ಹಾನಿ ಮಾಡಿದ್ದಾರೆ. ಬೈಕಂಪಾಡಿ ಕರ್ಕೇರ ಮೂಲ ಸ್ಥಾನ ಜರಂದಾಯ ದೈವಸ್ಥಾನ ಮತ್ತು ನಾಗನ ಬ್ರಹ್ಮ ಪೀಠವನ್ನು ದುಷ್ಕರ್ಮಿಗಳು ಹಾನಿಮಾಡಿದ್ದು ಭಾನುವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಮುಂಜಾನೆ ದೈವಸ್ಥಾನಕ್ಕೆ ಭೇಟಿ ನೀಡಿದವರು ಹಾನಿಯಾದದ್ದು ಗಮನಿಸಿ ಸಂಬಂಧಪಟ್ಟವರಿಗೆ ತಿಳಿಸಿದ್ದಾರೆ.
ಶಿಲಾಮಯ ನಾಗನ ಮೂರ್ತಿಯನ್ನು ಭಗ್ನ ಮಾಡಿದ್ದು, ಶಿಲೆಯಿಂದ ಮಾಡಲಾದ ನಂದಿಯ ವಿಗ್ರಹಕ್ಕೂ ಹಾನಿಮಾಡಿದ್ದಾರೆ. ಅದಲ್ಲದೆ ಕಪಾಟು ಒಡೆದು ಚೆಲ್ಲಾ ಪಿಲ್ಲಿ ಮಾದಿರುವುದರ ಜತೆಗೆ ದೈವಸ್ಥಾನದ ಹೊರಾಂಗಣದ ಗೇಟುಗಳನ್ನು ಮುರಿದು ಹಾಕಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ಥಳ ಮಹಜರು ಮಾಡಿದ್ದಾರೆ.
ಈ ಹಿಂದೆಯೂ ಮಂಗಳೂರು ಸುತ್ತಮುತ್ತಲ ದೈವ ಕ್ಷೇತ್ರಗಳಿಗೆ ಅಪಚಾರವೆಸಗಿ ದುಷ್ಕೃತ್ಯ ಮೆರೆಯಲಾಗಿತ್ತು. ಶಾಂತಿ ಭಂಗ ಮಾಡುವ ಇಂತಹಾ ಸಮಾಜ ಘಾತುಕರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.