ಮಂಗಳೂರು : ಅ 16: ನಿನ್ನೆ ತಡ ರಾತ್ರಿ ಯುವಕನೊಬ್ಬನನ್ನು ಆತನ ಸ್ನೇಹಿತನೇ ಪಾರ್ಟಿ ಮತ್ತಿನಲ್ಲಿ ಚೂರಿ ಇರಿದು ಹತ್ಯೆಗೈದ ಘಟನೆ ಮಂಗಳೂರಿನ ಲಾಡ್ಜ್ ವೊಂದರಲ್ಲಿ ನಡೆದಿದೆ. ಮಂಗಳೂರು ಸಮೀಪದ ಪಚ್ಚನಾಡಿ ನಿವಾಸಿ 20 ಹರೆಯದ ಧನುಷ್ ಮೃತ ಯುವಕ. ಸುರತ್ಕಲ್ ನಿವಾಸಿ ಜೇಸನ್ ಹತ್ಯೆಯ ಆರೋಪಿ.
ನಗರದ ಪಂಪ್‌ವೆಲ್ ಬಳಿ ಇರುವ ಸಾಯಿ ಪ್ಯಾಲೇಸ್ ಎಂಬ ಲಾಡ್ಜ್‌ನಲ್ಲಿ ಆರೇಳು ಮಂದಿ ಯುವಕರು ನಿನ್ನೆ ( ಅ 15ರ) ರಾತ್ರಿ ದಸರಾ ಪ್ರಯುಕ್ತ ಪಾರ್ಟಿ ಆಯೋಜಿಸಿದ್ದರು. ಜೇಸನ್, ಕಾರ್ತೀಕ್, ಧನುಷ್, ದುರ್ಗೇಶ ಮತ್ತು ಪ್ರಜ್ವಲ್ ಪಾರ್ಟಿ ಮಾಡುತ್ತಿದ್ದ ಯುವಕರು. ಎಣ್ಣೆ ಪಾರ್ಟಿ ತಡ ರಾತ್ರಿಯೂ ಮುಂದುವರಿದಿದ್ದು ಶನಿವಾರ ಮುಂಜಾನೆ 2 ಗಂಟೆ ಸುಮಾರಿಗೆ ಜೇಸನ್ ಸುರತ್ಕಲ್ ಮತ್ತು ಧನುಷ್ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳ ಶುರುವಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಸಂದರ್ಭ ಕುಡಿದ ಮತ್ತಿನಲ್ಲಿದ್ದ ಹಾಗೂ ತನ್ನ ಮೇಲೆ ನಿಯಂತ್ರಣ ಕಳಕೊಂಡಿದ್ದ ಜೇಸನ್ ತನ್ನಲ್ಲಿದ್ದ ಹರಿತವಾದ ಚಾಕುವಿನಿಂದ ಧನುಷ್‌ಗೆ ಚುಚ್ಚಿದ್ದಾನೆ. ಇದರಿಂದ ಧನುಷ್‌ಗೆ ಗಂಭೀರ ಗಾಯವಾಗಿದೆ. ಆತ ಅಲ್ಲೇ ಕುಸಿದು ಬಿದ್ದಿದ್ದಾನೆ. ಗಾಯಾಳುವನ್ನು ಜತೆಗಿದ್ದ ಇತರರು ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಿದಿದ್ದಾರೆ.ಅಲ್ಲಿ ಧನುಷ್ ಮೃತಪಟ್ಟಿರುವುದನ್ನು ವೈದ್ಯರು ತಿಳಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಕೊಲೆಯಾದ ಯುವಕ ಧನುಷ್ ಮೇಲೆ ದಾಳಿ ಮಾಡುವ ಸನ್ನಿವೇಶ ಮತ್ತು ಆಸ್ಪತ್ರೆಗೆ ಕೊಂಡೊಯ್ಯುವ ದೃಶ್ಯ ಹೊಟೇಲ್ ನ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಧನುಷ್‌ಗೆ ಗಂಭೀರವಾಗಿ ಹಲ್ಲೆ ಮಾಡಿದ ಬಳಿಕ ಆರೋಪಿ ಜೇಸನ್ ಆತ ಮೃತಪಟ್ಟಿರುವುದು ತಿಳಿಯುತ್ತಲೇ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಆರೋಪಿಯ ಪತ್ತೆಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ.
ಘಟನೆ ಸಂಬಂಧ ಕಂಕನಾಡಿ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಲಾಡ್ಜ್ ನ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ