ಪುತ್ತೂರು, ಅ.16: ಕಾರಿನಲ್ಲಿ ಅಕ್ರಮ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಬಂಧಿತ ಇಬ್ಬರಿಗೆ ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮಾಡೂರು ಗ್ರಾಮದ ಕಾವು ಎಂಬಲ್ಲಿ ಆಗಸ್ಟ್ 9ರಂದು ರಾತ್ರಿ ಅಬಕಾರಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಕಾರ್ ನಲ್ಲಿ ಗಾಂಜಾ
ಸಾಗಾಟ ಮಾಡುತ್ತಿದ್ದವರನ್ನು ಪತ್ತೆ ಮಾಡಿ ಸುಮಾರು 20 ಕೆ.ಜಿಯಷ್ಟು ಗಾಂಜಾವನ್ನು ವಶಪಡಿಸಿಕೊಂಡಿದ್ದರು.
ಆರೋಪಿಗಳಾದ ಕೇರಳ ಮೂಲದ ಮೂಸಾ ಅಡುಕಂ ಹಾಗೂ ಮಹಮ್ಮದ್ ಪ್ಯಾರೀಸ್ ಎಂಬ ಇಬ್ಬರನ್ನು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಿದಾಗ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.
ಕಾವು ಪೇಟೆಯಿಂದ ಪುತ್ತೂರು ಕಡೆ ಬರುತ್ತಿದ್ದ ಕಾರನ್ನು ತಪಾಸಣೆ ನಡೆಸಿದಾಗ ಕಾರಿನಲ್ಲಿ ತಲಾ 2 ಕೆ.ಜಿಯ 10 ಪ್ಯಾಕೆಟ್‌ನಲ್ಲಿದ್ದ ಒಟ್ಟು 24.6 ಕೆ.ಜಿ. ಗಾಂಜಾ ಪತ್ತೆಯಾಗಿತ್ತು. ಕಾರನ್ನು ಸಹಿತ ಗಾಂಜಾ ವಶಪಡಿಸಿಕೊಂಡ ಅಧಿಕಾರಿಗಳು ಇದರ ಮೌಲ್ಯ ರೂ.8 ಲಕ್ಷ ಆಗಿದೆ ಎಂದು ತಿಳಿಸಿದ್ದರು. ಪುತ್ತೂರು ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು.
ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳು ಜಾಮೀನಿನಲ್ಲಿ
ಬಿಡುಗಡೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ, ಗಾಂಜಾ ವಶಪಡಿಸಿಕೊಂಡ ರೀತಿಯೇ ಸಂಶಯಾಸದವಾಗಿದೆ. ವಶಪಡಿಸಿಕೊಂಡಿರುವ ವಸ್ತು ಗಾಂಜಾವೇ ಹೌದೋ ಅಲ್ಲವೋ ಎಂಬ ಬಗ್ಗೆಯೂ ಸಂಶಯವಿದೆ. ಮಹಜರು ವೇಳೆ ಪಾಲಿಸಬೇಕಾದ ಯಾವ ಅಂಶಗಳನ್ನು ಅಧಿಕಾರಿಗಳು ಪಾಲಿಸಿಲ್ಲ. ಆದುದರಿಂದ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಆರೋಪಿಗಳ ಪರ ಖ್ಯಾತ ನ್ಯಾಯವಾದಿ ಬಿ. ನರಸಿಂಹಪ್ರಸಾದ್ ಅವರು ನ್ಯಾಯಾಲಯದ ಮುಂದೆ ವಾದ ಮಂಡಿಸಿದರು. ವಾದವನ್ನು ಪುರಸ್ಕರಿಸಿದ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಆರೋಪಿಗಳಿಗೆ ಶರತ್ತುಬದ್ದ ಜಾಮೀನು ಮಂಜೂರು ಮಾಡಿದೆ.