ಬೆಂಗಳೂರು: ಸೋಷಿಯಲ್ ಮೀಡಿಯಾದ ಮೂಲಕ ಹನಿಟ್ರ್ಯಾಪ್ ಮಾಡುತ್ತಿದ್ದ ಗ್ಯಾಂಗ್ವೊಂದನ್ನು ಸಿಐಡಿ ಪೊಲೀಸರು ಅ 12ರಂದು ಬಂಧಿಸಿದ್ದಾರೆ. ಯುವತಿಯರ ಹೆಸರಲ್ಲಿ ಫೇಸ್ಬುಕ್ನಲ್ಲಿ ನಕಲಿ ಖಾತೆ ತೆರೆದು ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಈ ಖದೀಮರು, ಮೈಮುಟ್ಟದ ಬಟ್ಟೆ ಬಿಚ್ಚಿಸಿ ಹಣ ವಸೂಲಿ ಮಾಡುತ್ತಿದ್ದರು.
ರಾಜಸ್ಥಾನ ಮೂಲದ ಸಾಕೀರ್, ಕಸಮ್ ಖಾನ್, ಜಮೀಲ್ ಖಾನ್ ಬಂಧಿತರು. ಫೇಸ್ಬುಕ್ನಲ್ಲಿ ಮಹಿಳೆಯರ ಹೆಸರಿನಲ್ಲಿ ನಕಲಿ ಖಾತೆ ತೆರೆಯುತ್ತಿದ್ದ ಆರೋಪಿಗಳು, ಬಳಿಕ ಪುರುಷರಿಗೆ ಫ್ರೆಂಡ್ ರಿಕ್ವೇಸ್ಟ್ ಕಳುಹಿಸುತ್ತಿದ್ದರು. ಇದನ್ನು ಸ್ವೀಕರಿಸಿದವರ ಜತೆ ಮೆಸೆಂಜರ್ ಮೂಲಕ ಚಾಟ್ ಮಾಡಿ ಸಲುಗೆ ಬೆಳೆಸುತ್ತಿದ್ದರು.
ಬಳಿಕ ವಾಟ್ಸ್ಯಾಪ್ ನಂಬರ್ ವಿನಿಮಯ ಮಾಡಿಕೊಂಡು ವಿಡಿಯೊ ಕಾಲ್ ಮಾಡುತ್ತಿದ್ದರು. ನಂತರ ತಾನು ಬೆತ್ತಲಾಗಿರುವಂತೆ ರೆಕಾರ್ಡ್ಡೆಡ್ ವಿಡಿಯೊವೊಂದನ್ನು ತೋರಿಸಿ ಸೆಕ್ಸ್ ವಿಷಯ ಮಾತನಾಡಿ, ಪುರುಷನನ್ನು ಬೆತ್ತಲಾಗುವಂತೆ ಪ್ರಚೋದಿಸುತ್ತಿದ್ದರು.
ಒಂದು ವೇಳೆ ಪುರುಷ ಬೆತ್ತಲಾದರೆ ಅದನ್ನು ವಿಡಿಯೊ ರೆಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿ ಹಣ ಪೀಕುತ್ತಿದ್ದರು. ಅನೇಕ ಪೊಲೀಸ್ ಅಧಿಕಾರಿಗಳು ಈ ಜಾಲದಲ್ಲಿ ಸಿಲುಕಿ ಮೋಸ ಹೋಗಿರುವ ಬಗ್ಗೆ ದೂರುಗಳು ಬಂದಿವೆ.

ಪೊಲೀಸರು, ಪತ್ರಕರ್ತರು, ರಾಜಕಾರಣಿಗಳು, ಉದ್ಯಮಿಗಳು ಈ ರೀತಿ ಜಾಲದಲ್ಲಿ ಮೋಸ ಹೋಗಿರುವ ಬಗ್ಗೆ ದೂರು ದಾಖಲಿಸಿದ್ದರು. ಪ್ರಕರಣ ತನಿಖೆ ಕೈಗೊಂಡ ಸಿಐಡಿ ಪೊಲೀಸರು, ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ. ಆದರೆ, ವ್ಯವಸ್ಥಿತ ಜಾಲ ರಚಿಸಿಕೊಂಡು ವಂಚನೆ ಮಾಡುತ್ತಿದ್ದ ರಾಜಸ್ಥಾನದ ಈ ಗ್ಯಾಂಗ್ ಅಲ್ಲಿನ ಎರಡು ಜಿಲ್ಲೆಗಳಲ್ಲಿ ಬೀಡು ಬಿಟ್ಟಿದೆ.
ಬೆಂಗಳೂರಿನಲ್ಲೂ ಕುಕೃತ್ಯ ನಡೆಸುತ್ತಿರುವ ಈ ಗ್ಯಾಂಗ್ ಬಗ್ಗೆ ಸಿಐಡಿ ಪೊಲೀಸರು ಮತ್ತಷ್ಟು ಮಾಹಿತಿ ಕಲೆ ಹಾಕುತ್ತಿದ್ದು, ಆ ನಿಟ್ಟಿನಲ್ಲಿ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.