ವಿಟ್ಲ: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಇಡ್ಕಿದು ಗ್ರಾಮದ ಮಿತ್ತೂರು ಮಸೀದಿ ಸಮೀಪ ದ್ವಿಚಕ್ರ ವಾಹನ ಸವಾರರೋರ್ವರು ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ರಸ್ತೆ ಮಧ್ಯೆ ಬಿದ್ದು ಒದ್ದಾಡುತ್ತಿದ್ದ ಘಟನೆ ಸೆ 12 ರಂದು ಬೆಳಿಗ್ಗೆ ನಡೆದ ಬಗ್ಗೆ ವರದಿಯಾಗಿದೆ. ಇದನ್ನು ಗಮನಿಸಿದ ಅಟೋ ಚಾಲಕರೊಬ್ಬರು ಕೂಡಲೇ ಗಾಯಾಳುವನ್ನು ವಾಹನವೊಂದರಲ್ಲಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಿದರಾದರೂ ಆ ವೇಳೆಗೆ ಅವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ
ನಿಡ್ಪಳ್ಳಿ ಗ್ರಾಮದ ವಾಲ್ತಾಜೆ ನಾರಾಯಣ ನಾಯ್ಕ್ ರವರ ಪುತ್ರ ಸುರೇಶ್ ನಾಯ್ಕ್ ಮೃತಪಟ್ಟವರು. ಇವರು ಮಂಗಳೂರಿನ ರಿಬ್ಕೋ ಟ್ರೇಡಿಂಗ್ ಕಂಪೆನಿಯಲ್ಲಿ ಅಕೌಂಟೆಂಟ್ ಆಗಿದ್ದರು ಸ್ಥಳದಲ್ಲಿ ದೊರೆತ ಐಡಿಯಿಂದ ತಿಳಿದು ಬಂದಿದೆ
ಇಂದು ಬೆಳಿಗ್ಗೆ ಸ್ಥಳೀಯ ಹೈನುಗಾರರೊಬ್ಬರು ಮಿತ್ತೂರಿನ ಹಾಲಿನ ಸೊಸೈಟಿಗೆ ಹಾಲು ತರುತ್ತಿದ್ದ ವೇಳೆ ಮಿತ್ತೂರು ಮಸೀದಿ ಸಮೀಪದ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನ ಹಾಗೂ ಸವಾರ ಬಿದ್ದಿರುವುದನ್ನು ಗಮನಿಸಿದ್ದಾರೆ. ಈ ವೇಳೆ ಗಾಯಾಳು ಸುರೇಶ್ ಜೀವನ್ಮರಣದ ಸ್ಥಿತಿಯಲ್ಲಿ ಒದ್ದಾಡುತ್ತಿರುವುದನ್ನು ಗಮನಿಸಿದ ಅವರು ಕೂಡಲೇ ಆ ವೇಳೆ ಅಲ್ಲಿಗೆ ಆಗಮಿಸಿದ ವಾಹನವೊಂದರಲ್ಲಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲಿ ಅವರು ಮೃತಪಟ್ಟಿರುವುದು ತಿಳಿದು ಬಂದಿದೆ.

ವಾಹನವೊಂದು ಸುರೇಶ್ ರವರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿರಬಹುದು ಎಂದು ಅನುಮಾನಿಸಲಾಗಿದ್ದು, ಡಿಕ್ಕಿ ಹೊಡೆದ ವಾಹನವೂ ಪರಾರಿಯಾಗಿದೆ ಎಂದು ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದಾರೆ.


ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಹೆಚ್.ಈ. ನಾಗರಾಜ್ ರವರ ನೇತೃತ್ವದ ಪೊಲೀಸರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ . ಪ್ರಥಮವಾಗಿ ಗಾಯಾಳುವನ್ನು ನೋಡಿದ ವ್ಯಕ್ತಿ ನೀಡಿದ ದೂರಿನಂತೆ ಹಿಟ್ ಅಂಡ್ ರನ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ವಿಟ್ಲ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.
