ಬೆಂಗಳೂರು: ಪೊಲೀಸರ ತನಿಖಾ ವರದಿಯನ್ನು ಮಾಹಿತಿ ಹಕ್ಕು (ಆರ್ಟಿಐ) ಕಾಯ್ದೆಯಡಿ ಪಡೆಯುವ ಹಕ್ಕಿದೆ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಸಿಐಡಿ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ ಪ್ರಕರಣವೊಂದರ ತನಿಖಾ ವರದಿಯನ್ನು ನೀಡುವಂತೆ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಸಿಐಡಿ ಮಾಹಿತಿ ಅಧಿಕಾರಿಯು ಮಾಹಿತಿ ಹಕ್ಕಿನಡಿ ಬಿ ರಿಪೋರ್ಟ್ ಪ್ರತಿ ನೀಡಲು ನಿರಾಕರಿಸಿದ್ದರು.
ನಂತರ ಮಾಹಿತಿ ಹಕ್ಕು ಆಯೋಗಕ್ಕೆಈ ಬಗ್ಗೆ ಅರ್ಜಿದಾರರು ದೂರು ನೀಡಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಮಾಹಿತಿ ಹಕ್ಕು ಆಯೋಗ ಅರ್ಜಿದಾರರಿಗೆ ಮಾಹಿತಿ ನೀಡುವಂತೆ ಆದೇಶಿಸಿತ್ತು. ಮಾಹಿತಿ ಹಕ್ಕು ಆಯೋಗದ ಈ ಆದೇಶ ಪ್ರಶ್ನಿಸಿ ಸಿಐಡಿ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿತ್ತು.

ಇದೀಗ ರಿಟ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್ ಏಕಸದಸ್ಯ ಪೀಠವು ರಾಜ್ಯ ಮಾಹಿತಿ ಆಯುಕ್ತರ ಆದೇಶ ಎತ್ತಿಹಿಡಿದಿದೆ. ತನಿಖಾ ಹಂತದಲ್ಲಿ ಮಾಹಿತಿ ನೀಡದಂತೆ ನಿರ್ಬಂಧವಿದೆ. ಆದರೆ ತನಿಖೆ ಪೂರ್ಣಗೊಂಡ ಬಳಿಕ ಮಾಹಿತಿ ಪಡೆಯಬಹುದು ಎಂದು ನ್ಯಾಯಮೂರ್ತಿ ಎನ್ ಎಸ್ ಸಂಜಯ್ ಗೌಡ ಅವರ ಏಕ ಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.