ಸುಳ್ಯ: ಚುನಾವಣಾ ಪ್ರಚಾರ ಸಂದರ್ಭ ಜಿಪಂ ಮಾಜಿ ಸದಸ್ಯರೊಬ್ಬರ ಮಾನಭಂಗ ಯತ್ನ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಮುಖಂಡ ಹರೀಶ್ ಕಂಜಿಪಿಲಿ ಹಾಗೂ ಇತರ 13 ಮಂದಿಗೆ ಸುಳ್ಯ ನ್ಯಾಯಾಲಯ ನೀಡಿದ್ದ ಜೈಲು ಶಿಕ್ಷೆಯನ್ನು ಪುತ್ತೂರು ಸೆಷನ್ಸ್ ಕೋರ್ಟ್ ಅಮಾನತು ಮಾಡಿದೆ.
2013 ರ ವಿಧಾನಸಭಾ ಚುನಾವಣೆ ಸಂದರ್ಭ ಹರೀಶ್ ಕಂಜಿಪಿಲಿ ಹಾಗೂ ಇತರರು ಆಗಿನ ಜಿಪಂ ಸದಸ್ಯೆ ಸರಸ್ವತಿ ಕಾಮತ್ ಹಾಗೂ ಇತರ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಹಾಗೂ ಮಾನಭಂಗಕ್ಕೆ ಯತ್ನಿಸಿದ್ದರು ಎಂದು ಆರೋಪಿಸಲಾಗಿತ್ತು.
ಈ ಪ್ರಕರಣ ಸುಳ್ಯದ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಸೆ.9ರಂದು ಹರೀಶ್ ಕಂಜಿಪಿಲಿ, ಈಶ್ವರಪ್ಪ ಗೌಡ ಹರ್ಲಡ್ಕ, ರವಿಚಂದ್ರ ಕೊಡಪಾಲ, ಸವಿನ್ ಕೊಡಪಾಲ, ದಿವಾಕರ ನಾಯಕ್ ಎರ್ಮೆಟ್ಟಿ, ದಿನೇಶ ಚೆನ್ನೂರು, ರಾಮಚಂದ್ರ ಹಲ್ಲಡ್ಕ, ಷಣ್ಮುಖ ಸೂಟೆಗದ್ದೆ, ಧನಂಜಯ ಬೈಕಾಡಿ, ಬಾಲಕೃಷ್ಣ ಕಂಜಿಪಿಲಿ, ಮನೋಹರ, ದೀಪಕ್ ಎಲಿಮಲೆ, ಮನೋಜ್ ಎಂ.ಕೆ. ಮತ್ತು ವಿಶ್ವನಾಥ ಸಿ.ಎಲ್.ಯಾನೆ ವಿಕಾಸ್ ಎಂಬುವರನ್ನು ಅಪರಾಧಿಗಳೆಂದು ತೀರ್ಪು ನೀಡಿದ್ದ ಸುಳ್ಯ ಕೋರ್ಟ್, ಎಲ್ಲ ಅಪರಾಧಿಗಳಿಗೆ ತಲಾ 2 ವರ್ಷ ಜೈಲು ಶಿಕ್ಷೆ ಹಾಗೂ ದಂಡ ತೆರುವಂತೆ ಆದೇಶಿಸಿತ್ತು.

ತೀರ್ಪಿನ ವಿರುದ್ಧ ಮೇಲ್ಮನವಿಗೆ ಒಂದು ತಿಂಗಳ ಅವಕಾಶ ಹಾಗೂ ಅಪರಾಧಿಗಳಿಗೆ ಕೋರ್ಟ್ ತಕ್ಷಣವೇ ಜಾಮೀನು ನೀಡಿತ್ತು. ಸುಳ್ಯ ಕೋರ್ಟ್ ತೀರ್ಪಿನ ವಿರುದ್ಧ ಹರೀಶ್ ಕಂಜಿಪಿಲಿ ಮತ್ತಿತರರು ಪುತ್ತೂರಿನ ಜಿಲ್ಲಾ ಹೆಚ್ಚುವರಿ ಸೆಷನ್ಸ್ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಅಪರಾಧಿಗಳ ಜೈಲು ಶಿಕ್ಷೆಯನ್ನು ಅಮಾನತು ಮಾಡಿದ್ದಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದ ಕಡತಗಳನ್ನು ವಿಚಾರಣಾ ಕೋರ್ಟ್‌ಗೆ ಹಸ್ತಾಂತರಿಸುವಂತೆ ಸೂಚಿಸಿದೆ.
ಸುಳ್ಯ ಕೋರ್ಟ್ ವಿಧಿಸಿದ ದಂಡದ ಮೊತ್ತವನ್ನು ಮುಂದಿನ 15 ದಿನಗಳ ಒಳಗಾಗಿ ವಿಚಾರಣಾ ಕೋರ್ಟ್‌ನಲ್ಲಿ ಠೇವಣಿ ಇರಿಸಬೇಕು. ಎಲ್ಲ ಅಪರಾಧಿಗಳು ತಲಾ 50 ಸಾವಿರ ರೂ ವೈಯಕ್ತಿಕ ಬಾಂಡ್ ಹಾಗೂ ತಲಾ ಒಬ್ಬರು ಜಾಮೀನುದಾರರನ್ನು ಒದಗಿಸಬೇಕು ಎಂದು ಆದೇಶದಲ್ಲಿ ಸೂಚಿಸಿದೆ. ಹರೀಶ್ ಕಂಜಿಪಿಲಿ ಮತ್ತವರ ತಂಡದ ಪರ ವಕೀಲ ಮಹೇಶ್ ಕಜೆ ವಾದಿಸಿದ್ದರು.