ಕಳೆದ ಜುಲೈ ತಿಂಗಳಿನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಸಂದರ್ಭ ಪರೀಕ್ಷೆ ಬರೆಯಲು ಅವಕಾಶ ಸಿಕ್ಕಿಲ್ಲ ಎಂದು ನೊಂದು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ ಗ್ರೀಷ್ಮಾ ಎನ್. ನಾಯಕ್ ಸೆಪ್ಟಂಬರ್ ಅಂತ್ಯದಲ್ಲಿ ನಡೆದ ಪೂರಕ ಪರೀಕ್ಷೆಯಲ್ಲಿ ಅದ್ಭುತ ಸಾಧನೆಗೈದು ರಾಜ್ಯಕ್ಕೆ ಟಾಪರ್ ಆಗಿದ್ದಾಳೆ ತುಮಕೂರು ಜಿಲ್ಲೆಯ ಕೊರಟಗೆರೆಯ ನರಸಿಂಹಮೂರ್ತಿ ಮತ್ತು ಪದ್ಮಾವತಿ ದಂಪತಿಯ ಪುತ್ರಿ ಗ್ರೀಷ್ಮಾ ಎನ್. ನಾಯಕ್ 625ಕ್ಕೆ 599 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಸೆ.27 ಮತ್ತು 29ರಂದು2020-21ನೇ ಸಾಲಿನ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಶಿಕ್ಷಣ ಇಲಾಖೆ ಅಯೋಜಿಸಿತ್ತು.
ಮೂಡಬಿದ್ರೆಯ ಆಳ್ವಾಸ್ ಶಾಲೆಯಲ್ಲಿ ಓದುತ್ತಿದ್ದ ಗ್ರೀಷ್ಮಾ ಎನ್. ನಾಯಕ್, 9ನೇ ತರಗತಿಯಲ್ಲಿ ಶೇ.96 ಅಂಕ ಪಡೆದಿರುವ ಈಕೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮನೆಗೆ ಬಂದಿದ್ದಳು. ನಂತರ ಶಾಲಾ ಆಡಳಿತ ಮಂಡಳಿ 9ನೇ ತರಗತಿಯ ಶುಲ್ಕ ಬಾಕಿ ಇದ್ದ ಹಿನ್ನೆಲೆಯಲ್ಲಿ 10ನೇ ತರಗತಿಗೆ ಪ್ರವೇಶ ಕಲ್ಪಿಸಿಲ್ಲ. ಗ್ರೀಷ್ಮಾ ತನ್ನ 9ನೇ ತರಗತಿಯ ಶಾಲಾ ಶುಲ್ಕದಲ್ಲಿ ಸ್ವಲ್ಪ ಹಣವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನಕ್ಕೆ ಭರಿಸಬೇಕಾಗಿತ್ತು. ಆದರೆ ಕೊರೊನಾ ವೈ ರಸ್ ಲಾಕ್‌ಡೌನ್ ನಿಂದಾಗಿ ಶುಲ್ಕ ಭರಿಸಲು ಆಗಿರಲಿಲ್ಲ ಎಂದಿದ್ದ ಗ್ರೀಷ್ಮಾ ತಂದೆ ಹೀಗಾಗಿಯೇ ಅಳ್ವಾಸ್ ಶಾಲೆ ಪರೀಕ್ಷೆ ಬರೆಯಲು ಅವಕಾಶ ನೀಡಿರಲಿಲ್ಲ ಎಂದು ಆರೋಪಿಸಿದ್ದರು.
ಪಾಲಕರು ಎಸ್ಸೆಸ್ಸೆಲ್ಸಿ ಪರೀಕ್ಷೆ ನೋಂದಣಿ ಬಗ್ಗೆ ಸಂಸ್ಥೆಯಲ್ಲಿ ವಿಚಾರಿಸಿದಾಗ ಶುಲ್ಕ ಕಟ್ಟದ ಕಾರಣ ಪರೀಕ್ಷೆಗೆ ನೋಂದಣಿಯಾಗದ ಬಗ್ಗೆ ತಿಳಿದುಬಂದಿದೆ. ಇದರಿಂದ ನೊಂದ ವಿದ್ಯಾರ್ಥಿನಿ ಮಕ್ಕಳ ಹಕ್ಕುಗಳ ಆಯೋಗದ ಮೊರೆ ಹೋಗಿ, ಡಿಡಿಪಿಐ, ಶಿಕ್ಷಣ ಸಚಿವರಿಗೆ ಇ-ಮೇಲ್ ಮಾಡಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಕಳೆದ ಜುಲೈ 17ರಂದು ಆತ್ಮಹತ್ಯೆಗೆ ಯತ್ನಿಸಿದ್ದಳು. ವಿಷಯ ತಿಳಿದ ಕೂಡಲೇ ಅಂದಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿದ್ಯಾರ್ಥಿನಿ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು.

“ರಸಪ್ರಶ್ನೆ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ಬಹುಮಾನಗಳು ಸೇರಿದಂತೆ ಅನೇಕ ಸ್ಪರ್ಧೆಗಳಲ್ಲಿ ಬಹುಮಾನ ಗೆದ್ದ ಪ್ರತಿಭಾನ್ವಿತ ವಿದ್ಯಾರ್ಥಿನಿ ಒಂಬತ್ತನೇ ತರಗತಿಯ ಪರೀಕ್ಷೆಯಲ್ಲಿ ಶೇಕಡಾ 96 ಅಂಕಗಳನ್ನು ಗಳಿಸಿದ್ದಾರೆ. ಆಕೆ ಮುಂದೆ ಓದಿ ವೈದ್ಯಳಾಗುವ ಕನಸು ಕಾಣುತ್ತಿದ್ದಾಳೆ. “ನೀವು ಜೀವಗಳನ್ನು ಉಳಿಸಲು ಬಯಸಿದರೆ ನೀವು ದೃಢ ಮನಸ್ಕರಾಗಿರಬೇಕು ಎಂದು ನಾನು ಅವಳಿಗೆ ಹೇಳಿದೆ” ಎಂದು ಸುರೇಶ್ ಕುಮಾರ್ ಆ ಬಳಿಕ ಮಾಧ್ಯಮಗಳಿಗೆ ತಿಳಿಸಿದರು.

ಅಲ್ಲದೇ ಆಕೆ ಪೂರಕ ಪರೀಕ್ಷೆಯಲ್ಲಿ ಬರೆಯಲು ಅಂದಿನ ಶಿಕ್ಷಣ ಸಚಿವರು ಅವಕಾಶ ಕಲ್ಪಸಿದ್ದರು.