ಪುತ್ತೂರು : ಅ 8: ಕುಡಿತದ ಚಟ ಹೊಂದಿದ್ದ ವ್ಯಕ್ತಿಯೊಬ್ಬ ತನ್ನ ಮಗನಿಗೆ ಜ್ಯೂಸ್‌ನಲ್ಲಿ ವಿಷ ಬೆರಸಿ ಕುಡಿಸಿದ ಅಘಾತಕಾರಿ ಘಟನೆ ಕಡಬ ತಾಲೂಕು ಬಲ್ಯ ಗ್ರಾಮದ ಗೋಣಿಗುಡ್ಡೆ ಎಂಬಲ್ಲಿ ಕೆಲ ದಿನಗಳ ಹಿಂದೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಬಾಳೆಗುಂಡಿ ನಿವಾಸಿ ವಿಶ್ವನಾಥ ಕೃತ್ಯ ಈ ಎಸಗಿರುವುದಾಗಿ ಆತನ ಪತ್ನಿ ಚಂದ್ರಾವತಿ ಆರೋಪಿಸಿದ್ದಾರೆ. ಘಟನೆಯೂ ಮೂರು- ನಾಲ್ಕು ದಿನಗಳ ಹಿಂದೆ ನಡೆದಿದ್ದು ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ವಿಶ್ವನಾಥನ ಇಬ್ಬರು ಮಕ್ಕಳು ಹಾಗೂ ಪತ್ನಿ ಚಂದ್ರಾವತಿ ತವರು ಮನೆ ಬಲ್ಯದಲ್ಲಿದ್ದ ವೇಳೆ ಅಲ್ಲಿಗೆ ಬಂದ ವಿಶ್ವನಾಥ ಈ ಕೃತ್ಯ ಎಸಗಿರುವುದಾಗಿಯೂ ಬಳಿಕ ತಾನೂ ವಿಷ ಸೇವಿಸಿರುವುದಾಗಿಯೂ ತಿಳಿದು ಬಂದಿದೆ. ಸದ್ಯ ವಿಶ್ವನಾಥ ಹಾಗೂ ಮಗನನ್ನು ಆಸ್ಫತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ
ವಿಶ್ವನಾಥ ಕುಡಿತದ ಚಟ ಹೊಂದಿದ್ದು, ಕುಡಿದು ಬಂದು ಪತ್ನಿ ಚಂದ್ರಾವತಿ ಜೊತೆ ಆಗಾಗ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ಪತ್ನಿ ಚಂದ್ರಾವತಿ ಗಂಡನ ಮನೆ ಬಿಟ್ಟು ತವರು ಮನೆಯಾದ ಕಡಬ ತಾಲೂಕು ಬಲ್ಯ ಗ್ರಾಮದ ಗೋಣಿಗುಡ್ಡೆಗೆ ಬಂದು ವಾಸವಾಗಿದ್ದರು.
ಇಲ್ಲಿಗೆ ಕೆಲ ದಿನಗಳ ಹಿಂದೆ ಬಂದಿದ್ದ ವಿಶ್ವನಾಥ ತನ್ನ ಇಬ್ಬರು ಅಪ್ರಾಪ್ತ ಮಕ್ಕಳಿಗೆ ಜ್ಯೂಸ್ ಕುಡಿಸಲು ಯತ್ನಿಸಿದ್ದಾನೆ. ಓರ್ವ ಮಗ ಜ್ಯೂಸ್ ಕುಡಿದಿದ್ದು, ಇನ್ನೊರ್ವ ಮಗ ಬೇಡವೆಂದು ನಿರಾಕರಿಸಿದ್ದಾನೆ. ಆದರೇ ಆತನಿಗೂ ವಿಶ್ವನಾಥ ಒತ್ತಾಯ ಮಾಡಿದ್ದು ಆತ ಅದನ್ನು ತನ್ನ ತಾಯಿಯಲ್ಲಿ ಹೇಳಿದ್ದಾನೆ. ಈ ಬಗ್ಗೆ ಹೆಂಡತಿ ಪ್ರಶ್ನಿಸಿದಾಗ ವಿಶ್ವನಾಥ ನಾನು ಜ್ಯೂಸ್‌ನಲ್ಲಿ ಮಗನಿಗೆ ವಿಷ ಬೆರೆಸಿ ಕುಡಿಸಿದ್ದೇನೆ, ಅಷ್ಟೇ ಅಲ್ಲದೇ ನಾನು ಕೂಡ ವಿಷ ಕುಡಿದಿದ್ದೇನೆ ಎಂದು ಹೇಳಿರುವುದಾಗಿ ತಿಳಿದು ಬಂದಿದೆ.

ಇದರಿಂದ ಗಾಬರಿಯಾದ ಚಂದ್ರಾವತಿ ಹಾಗೂ ಇತರರು ವಿಷ ಸೇವಿಸಿದ್ದಾರೆ ಎನ್ನಲಾದ ಮಗ ಮತ್ತು ವಿಶ್ವನಾಥನನ್ನು ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಪುತ್ತೂರು ಪ್ರಗತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕನ ಆರೋಗ್ಯ ವಿಷಮಿಸಿದ ಹಿನ್ನಲೆಯಲ್ಲಿ ಆತನನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆತನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ತಿಳಿದುಬಂದಿದೆ