ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಅ .6 ಮತ್ತು 7 ರಂದು ಒಂದಕ್ಕೊಂದು ಸಂಬಂಧ ಹೊಂದಿದ್ದ ಎರಡು ಪ್ರತ್ಯೇಕ ಹಲ್ಲೆ ಹಾಗೂ ಕೊಲೆ ಯತ್ನ ಪ್ರಕರಣಗಳು ದಾಖಲಾಗಿದ್ದು, ಒಟ್ಟು 7 ಜನರನ್ನು ಪೊಲೀಸರು ಬಂಧಿಸಿದ್ದಾರೆ . ಎರಡು ಭಿನ್ನ ಭಿನ್ನ ಕೋಮಿಗೆ ಸೇರಿದ ಯುವಕರ ತಂಡಗಳ ನಡುವೆ ರಾಜಕೀಯ ಕಾರಣಕ್ಕೆ ಶುರುವಾದ ಗಲಾಟೆಯೂ ಬಳಿಕ ಹೊಡೆದಾಟದ ಸ್ವರೂಪ ಪಡೆದಿದ್ದು , ಸಂಘರ್ಷದ ವಿಡೀಯೊಗಳು ಸಾಮಾಜಿಕ ಜಾಲತಾಣದಲ್ಲೂ ಹರಿದಾಡಿ ಉದ್ವೀಘ್ನತೆಗೂ ಕಾರಣವಾಗಿದೆ.
ಕಾವೂರು ಠಾಣಾ ವ್ಯಾಪ್ತಿಯಲ್ಲಿ ಅ.6ರಂದು ರಾತ್ರಿ ಮೊದಲ ಪ್ರಕರಣ ನಡೆದಿದ್ದರೇ, ಎರಡನೇ ಪ್ರಕರಣವೂ ಮೂಡುಶೆಡ್ಡೆ ಪರಿಸರದಲ್ಲಿ ನಡೆದಿತ್ತು. ಅ. 6 ರಂದು ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಮ್ಮದ್ ಅಷ್ಪಕ್ ಎಂಬಾತ ನೀಡಿದ ದೂರಿನ ಮೇರೆಗೆ ಸಂಘಟನೆಯೊಂದಕ್ಕೆ ಸೇರಿದ್ದಾರೆ ಎನ್ನಲಾದ ಮನೋಜ್ ಮೂಡುಶೆಡ್ಡೆ, ವೀರೇಶ್ ಮೂಡುಶೆಡ್ಡೆ ಎಂಬವರನ್ನು ಬಂಧಿಸಲಾಗಿದೆ.
ಅ 7 ರಂದು ನಡೆದ ಪ್ರಕರಣದಲ್ಲಿ ವೀವೆಕಾನಂದ ಎಂಬವರು ನೀಡಿದ ದೂರಿನ ಅನ್ವಯ ನಿಝಾಮ್, ಶಾರುಖ್, ದಾವೂದ್ ಹಕೀಮ್ ಹಾಗು ರೌಡಿ ಶೀಟರ್ ಗಳಾದ ರಿಝ್ವಾನ್, ಮುಸ್ತಫಾ ಎಂಬವರನ್ನು ಬಂಧಿಸಲಾಗಿದೆ
ಏನಿದು ಪ್ರಕರಣ ?
ಜಿಲ್ಲೆಯ ಹೆಸರಾಂತ ರಾಜಕೀಯ ನಾಯಕರೊಬ್ಬರನ್ನು ಬೆಂಬಲಿಸಿ ಮಹಮ್ಮದ್ ಅಸ್ಫಕ್ ಎಂಬಾತ ಪೋಸ್ಟ್ ಹಾಕಿದ್ದ , ಇದೇ ವಿಚಾರ ಗಲಾಟೆಗೆ ಮೂಲವಾಗಿದೆ ಎಂದು ಹೇಳಲಾಗಿದೆ . ಅ.6ರಂದು ರಾತ್ರಿ 11ರ ವೇಳೆಗೆ ಮೂಡುಶೆಡ್ಡೆಯ ಪಿಲಿಕುಳ ನಿಸರ್ಗಧಾಮದ ಬಳಿ ಅಸ್ಫಕ್ ಎಂಬಾತ ತನ್ನ ಸ್ನೇಹಿತರ ಜತೆ ನಿಂತಿರುವಾಗ ನಾಲ್ಕು ಮಂದಿಯ ತಂಡವೊಂದು ಬಂದು ‘ಒಬ್ಬ ರಾಜಕೀಯ ಪಕ್ಷದ ಮುಖಂಡನ ಪರವಾಗಿ ಮಾತನಾಡುತ್ತೀಯಾʼ ಎಂದು ಹಲ್ಲೆ ನಡೆಸಿ ಪರಾರಿಯಾಗಿದ್ದರು ಎಂದು ತಿಳಿದುಬಂದಿದ್ದು, ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಘಟನೆಯೂ ಸ್ತಳೀಯ ಸಿಸಿಟಿವಿಯಲ್ಲಿ ದಾಖಲಾಗಿತ್ತು ಎನ್ನಲಾಗಿದೆ.
ಎರಡನೇ ಪ್ರಕರಣ:
ಅಸ್ಫಕ್ ಗೆ ಹಲ್ಲೆ ನಡೆಸಿದ ತಂಡದಲ್ಲಿ ವಿವೇಕಾನಂದ ಎಂಬಾತನೂ ಇದ್ದ ಎನ್ನಲಾಗಿದೆ. ಮರುದಿನ ಸಂಜೆ ( ಅ 7 ರಂದು) ಹಲ್ಲೆಗೊಳಗಾದ ಅಸ್ಫಕ್, ಆತನ ಸಹೋದರ ಹಾಗೂ ಇತರರು ಸೇರಿ ಎಂಟು ಜನರಿದ್ದ ತಂಡವೂ ಮೂಡುಶೆಡ್ಡೆ ಪರಿಸರಕ್ಕೆ ಮಾರಕಾಯುಧದೊಂದಿಗೆ ಬಂದು ಸಾರ್ವಜನಿಕ ಸ್ಥಳದಲ್ಲಿ ವಿವೇಕಾನಂದ ಹಾಗೂ ಜತೆಗಿದ್ದ ಇತರ ಮೂವರಿಗೆ ಮಚ್ಚು ಝಳಪಿಸಿದೆ ಎಂದು ಆರೋಪಿಸಲಾಗಿದೆ. ಅಲ್ಲದೇ ತಂಡವೂ ಈ ನಾಲ್ವರನ್ನು ಅಟ್ಟಾಡಿಸಿದೆ.
ಈ ಸಂದರ್ಭ ನಾಲ್ವರು ಯುವಕರು ಓಡಿ ಹೋಗಿ ಅಂಗಡಿಯೊಂದರಲ್ಲಿ ಅಶ್ರಯ ಪಡೆದಿದ್ದಾರೆ. ಅಲ್ಲಿಗೆ ಬಂದ ತಂಡವೂ ಒಳ ಪ್ರವೇಶಿಸಲು ಪ್ರಯತ್ನಿಸಿದ್ದು, ಆಗ ಅಂಗಡಿಯಲ್ಲಿದ್ದವರು ತಡೆದಿದ್ದಾರೆ. ಬಳಿಕ ಜೀವ ಬೆದರಿಕೆ ಹಾಕಿ ತಂಡ ತೆರಳಿದೆ. ಘಟನೆಯ ವಿಡೀಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದೂ, ಅದರಲ್ಲಿ ಯುವತಿಯೊಬ್ಬರು ತುಳುವಿನಲ್ಲಿ ಹಲ್ಲೆಗೆ ಬಂದ ತಂಡಕ್ಕೆ ಗಲಾಟೆ ಮಾಡದಂತೆ ನಿವೇದಿಸುವುದು ಕೇಳುತ್ತದೆ. ಈ ಪ್ರಕರಣಕ್ಕೆ ಸಂಬಂಧಿಸಿ 5 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ರಿಮಿನಲ್ ಹಿನ್ನಲೆ
ಈ ಪೈಕಿ ಇಬ್ಬರಿಗೆ ಅಪರಾಧ ಹಿನ್ನೆಲೆ ಇದೆ. ಕತ್ತಿ ಹಿಡಿದು ಓಡಾಡುತ್ತಿದ್ದವನ ವಿರುದ್ಧ ಮಂಗಳೂರು ಗ್ರಾಮಾಂತರ ಮತ್ತು ಸುರತ್ಕಲ್‌ನಲ್ಲಿ 2 ಪ್ರಕರಣ ಇದೆ. ಇನ್ನೋರ್ವನ ವಿರುದ್ಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಇವರಿಬ್ಬರು ಕಾವೂರು ಠಾಣೆಯ ರೌಡಿ ಶೀಟರ್ ಗಳಾಗಿದ್ದಾರೆ ಎಂದು ಆಯುಕ್ತರು ತಿಳಿಸಿದ್ದಾರೆ.ಸ್ಥಳೀಯ ರಾಜಕೀಯ ಮುಖಂಡರೊಬ್ಬರಿಗೆ ಸಾಮಾಜಿಕ ಜಾಲತಾಣದಲ್ಲಿ ಬೆಂಬಲ ವ್ಯಕ್ತಪಡಿಸಿ ಪೋಸ್ಟ್ ಹಾಕಿದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ಆಯುಕ್ತರು ತಿಳಿಸಿದ್ದಾರೆ