ಕಾಸರಗೋಡು, ಅ. 7: ಪಿಕ್‌ಪಾಕೆಟ್ ಕಳ್ಳನೊಬ್ಬ ತಾನೂ ಪಿಕ್ ಪಾಕೆಟ್ ಮಾಡಿದ್ದ ಪರ್ಸ್ ನಲ್ಲಿದ್ದ ಬೆಲೆ ಬಾಳುವ ದಾಖಲೆಗಳನ್ನು ಅಂಚೆ ಮೂಲಕ ಅದರ ವಾರಸುದಾರರಿಗೆ ಕಳುಹಿಸಿದ ಘಟನೆ ಕಾಸರಗೋಡು ಜಿಲ್ಲೆಯಲ್ಲಿ ನಡೆದಿದೆ.
ಮೂರು ದಿನಗಳ ಹಿಂದೆ ಕಾಸರಗೋಡು ಆಸ್ಪತ್ರೆಗೆ ಆಗಮಿಸಿದ್ಧ ಪೊಯಿನಾಚಿಯ ಕೆ. ಮಾಧವನ್ ನಾಯರ್ ಅವರ ಪರ್ಸ್ ಬಸ್‌ನಲ್ಲಿ ಪಿಕ್ ಪಾಕೆಟ್ ಆಗಿತ್ತು. ಆ ಪರ್ಸ್ ನಲ್ಲಿ 7 ಸಾವಿರ ರೂಪಾಯಿ ಹಣ, ಡೈವಿಂಗ್ ಲೈಸನ್ಸ್, ಪಾನ್ ಕಾರ್ಡ್, ಎಟಿಎಂ ಕಾರ್ಡ್, ಆಧಾರ್ ಕಾರ್ಡ್ ಇತ್ಯಾದಿ ಅಗತ್ಯ ದಾಖಲೆಗಳಿದ್ದವು.
ಪರ್ಸ್ ಕಳವಾಗಿರುವ ಕುರಿತು ಮಾಧವನ್ ನಾಯರ್ ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದು, ದುಡ್ಡನ್ನು ಇರಿಸಿಕೊಂಡು ದಾಖಲೆ ಪತ್ರ ಸಿಕ್ಕಿದವರು ಮರಳಿಸುವಂತೆ ಕೋರಿದ್ದರು.ಆ ಜಾಹೀರಾತು ಪ್ರಕಟವಾದ ಎರಡು ದಿನದ ಬಳಿಕ ಆ ಎಲ್ಲ ದಾಖಲೆಗಳು ಅಂಚೆ ಮೂಲಕ ಅವರ ಕೈಸೇರಿದೆ. ಪರ್ಸ್‌ನಲ್ಲಿ 7 ಸಾವಿರ ರೂ. ಗಳನ್ನು ಕಳ್ಳ ಇರಿಸಿಕೊಂಡಿದ್ದಾನೆ.
