ಸಾವಿರ ವರ್ಷಕ್ಕೂ ಅಧಿಕ ಕಾಲದ ಪ್ರಾಚೀನ ಹಿನ್ನಲೆ ಹೊಂದಿರುರುವ ಶಕ್ತಿ ಸ್ವರೂಪಿಣಿ ಶ್ರೀ ದೇವಿಯ ಆರಾಧನಾ ಕ್ಷೇತ್ರ ಪುತ್ತೂರು ತಾಲೂಕು ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟುವಿನ ಕಾರಣೀಕ ಪ್ರಸಿದ್ದ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಇದೀಗ ನವರಾತ್ರಿ ಉತ್ಸವದ ಸಂಭ್ರಮ. ಅ.7 ರಿಂದ ಅ.15 ರವರೆಗೆ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆ ವೈಭವದೊಂದಿಗೆ ನವರಾತ್ರಿ ಉತ್ಸವ ಜರುಗಲಿದೆ. ಬಂದ ಭಕ್ತರ ಹಸಿವು ತಣಿಸುವ ಅನ್ನ ದಾಸೋಹವೂ ಉತ್ಸವದ 10 ದಿನವೂ ನಡೆಯಲಿದೆ.
ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ಮಾರ್ಗದರ್ಶನದಲ್ಲಿ, ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಮುಂದಾಳತ್ವದಲ್ಲಿ ,ದೇಗುಲದ ಪ್ರಧಾನ ಅರ್ಚಕರಾದ ರಾಮಕೃಷ್ಣ ಭಟ್ ನೇತ್ರತ್ವದಲ್ಲಿ ಪೂರ್ವಶಿಷ್ಟ ಪರಂಪರೆಯಂತೆ ಶ್ರದ್ದಾ –ಭಕ್ತಿಯಿಂದ ಅ.7 ರಂದು ಉತ್ಸವದ ಶ್ರೀ ಗಣೇಶ ಮಾಡಲಾಯಿತು.
ನಿರಂಜನ್ ರೈ ಮಠಂತಬೆಟ್ಟು, ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಜಯಪ್ರಕಾಶ್ ಬದಿನಾರು, ರಮೇಶ್ ನಾಯಕ್ ನಿಡ್ಯ, ಕುಮಾರನಾಥ್ ಪಲ್ಲತ್ತಾರು, ರಾಜೀವ ಶೆಟ್ಟಿ ಕೇದಗೆ, ಕೇಶವ ಭಂಡಾರಿ ಕೃಪ ಬೆಳ್ಳಿಪ್ಪಾಡಿ, ಯೋಗೀಶ್ ಎಸ್. ಸಾಮಾನಿ ಸಂಪಿಗೆದಡಿ-ಮಠಂತಬೆಟ್ಟು, ವಿಜಯ ನಾಯ್ಕ ಗೋಳಿತೊಟ್ಟು, ಜಗನ್ನಾಥ ಶೆಟ್ಟಿ ನಡುಮನೆ, ಧರ್ಮಾವತಿ ಆರ್, ಆಚಾರ್ಯ ಸೇಡಿಯಾಪು, ವಿಜಯ ಶಾಂತರಾಮ ಗೌಡ ಬಾರಿಕುಮೇರು ಶ್ರೀಮತಿ ರೇಣುಕಾ ಮುರಳೀಧರ ರೈ ಮಠಂತಬೆಟ್ಟು, ದೇವದಾಸ ಗೌಡ ಪಿಲಿಗುಂಡ, ಮಮತಾ ಗಂಗಾಧರ ಶೆಟ್ಟಿ ಮತ್ತು ಶ್ರೀಮತಿ ಯಮುನಾ ಡೆಕ್ಕಾಜೆಯವರನ್ನು ಒಳಗೊಂಡ ನವರಾತ್ರಿ ಉತ್ಸವ ಸಮಿತಿಯೂ ವಿವಿಧ ಕಾರ್ಯಕ್ರಮಗಳಿಗೆ ಸಹಕರಿಸಲಿದೆ.

ದೇವಸ್ಥಾನದ ಬಗ್ಗೆ
ಈ ದೇಗುಲವು ರಾಜತುಲ್ಯವಾದ ಅನುಪವೀತಯಾದವರಿಂದ ಹಲವು ಶತಮಾನಗಳ ಹಿಂದೆ ನಿರ್ಮಿಸಲ್ಪಟ್ಟಿರಬೇಕು ಎಂದು ನಂಬಲಾಗುತ್ತಿದೆ.ಇದಕ್ಕೆ ಉಂಬಳಿ ಭೂಮಿ ಇತ್ತು ಆದ್ದರಿಂದ ಇಲ್ಲಿ ನಿತ್ಯಪೂಜೆ ವಿಶೇಷ ಉತ್ಸವ ಜಾತ್ರೆಗಳು ನಡೆಯುತ್ತಿದ್ದವು ಎನ್ನಲಾಗಿದೆ. ಇಲ್ಲಿ ಒಂದು ಮಠಶಾಲೆಯೂ ಇದ್ದು ಜನರಿಗೆ ಶಿಕ್ಷಣ ನೀಡುವ ವ್ಯವಸ್ಥೆ ಇತ್ತೆಂದು ಕಂಡುಬಂದಿದೆ. ಈ ಕಾರಣದಿಂದಲೇ ಮಠಂತಬೆಟ್ಟು ಎಂಬ ಹೆಸರು ಬಂದಿರಬಹುದೆಂದು ಊಹಿಸಲಾಗಿದೆ.ಬೆಟ್ಟು(ಒಂದು ಬೆಳೆ ಬೆಳೆಯುವ)ಗದ್ದೆಗಳ ಊರಿನಲ್ಲಿ ಈ ವೇದಾಧ್ಯಯನದ ಮಠದಲ್ಲಿ ಶ್ರೀಮಹಿಷಮರ್ದಿನಿಯನ್ನು ಪೂಜಿಸುತ್ತಿದ್ದರು.ಕಾಲಕ್ರಮೇಣ ಮಠ ನಡೆಸುವ ಮನೆಯವರು ನಿಸ್ಸಂತಾನ ಹೊಂದಿದ್ದರಿಂದ ಮುಂದೆ ಜೈನರಾಜರ ಆಳ್ವಿಕೆಯಲ್ಲಿ ರಾಜರ ಸಹಕಾರದೊಂದಿಗೆ ಊರವರು ಮಹಿಷಮರ್ದಿನಿಯನ್ನು ಈಗಿರುವ ಸ್ಥಳದಲ್ಲಿ ನೆಲೆಗೊಳಿಸಿದರು.




