ಮಂಗಳೂರು, ಅ.7: ಮಂಗಳೂರಿನಲ್ಲಿ ಅ. 5ರಂದು ನಡೆದ ಮೋರ್ಗನ್ಸ್‌ಗೇಟ್ ಶೂಟೌಟ್ ಪ್ರಕರಣದಲ್ಲಿ ಮಗನ ಮೇಲೆ ಗುಂಡು ಹಾರಿಸದ ಆರೋಪದಲ್ಲಿ ವೈಷ್ಣವಿ ಕಾರ್ಗೋ ಸಂಸ್ಥೆಯ ಮಾಲಕ ರಾಜೇಶ್ ಪ್ರಭು ನನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.
ತಂದೆಯಿಂದಲೇ ಹಾರಿಸಲ್ಪಟ್ಟ ಗುಂಡು ತಾಗಿ ಗಂಭೀರವಾಗಿ ಗಾಯಗೊಂಡ ಮಗ ಸುದೀಂದ್ರ ಅಸ್ಫತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಮೆದುಳು ನಿಷ್ಕ್ರಿಯಗೊಂಡಿದೆ ವೈದ್ಯ ಮೂಲಗಳು ತಿಳಿಸಿವೆ.
ಮೋರ್ಗನ್ಸ್‌ಗೇಟ್‌ನ ವೈಷ್ಣವಿ ಎಕ್ಸ್‌ಪ್ರೆಸ್ ಕಾರ್ಗೊ ಸರಕು ಸಾಗಾಟ ಸಂಸ್ಥೆಯಲ್ಲಿ ಸೆ.30ರಂದು ಅಶ್ರಫ್, ಚಂದ್ರಹಾಸ ಎಂಬಿಬ್ಬರು ಹೊಸತಾಗಿ ಕೆಲಸಕ್ಕೆ ಸೇರಿಕೊಂಡಿದ್ದರು. ಅದೇ ದಿನ ಗೂಡ್ಸ್ ಕಂಟೈನರ್ ವಾಹನಕ್ಕೆ ಚಾಲಕ, ಕ್ಲೀನರ್ ಆಗಿ ಮುಂಬೈಗೆ ತೆರಳಿ ಅ.3ಕ್ಕೆ ವಾಪಸಾಗಿದ್ದರು. ಅವರಿಗೆ ಮೊದಲೇ 10 ಸಾವಿರ ರೂ. ಸಂಬಳ ನೀಡಲಾಗಿತ್ತು. ಇನ್ನುಳಿದ 4000 ರೂ.ನ್ನು ಪುನಃ ನೀಡುವುದಾಗಿ ಮಾಲಕ ರಾಜೇಶ್ ಪ್ರಭು ಎರಡು ದಿನ ಸತಾಯಿಸಿದ್ದ ಎಂದು ಹೇಳಲಾಗುತ್ತಿದೆ.
ಅ.5ರಂದು ಸಂಜೆ 3:30ಕ್ಕೆ ಕಚೇರಿಗೆ ಬಂದ ಚಾಲಕ ಹಾಗೂ ಕ್ಲೀನರ್ ಬಾಕಿ ಹಣ ಪಾವತಿಸುವಂತೆ ಸಂಸ್ಥೆಯ ಮಾಲಕನ ಪತ್ನಿ ಶಾಂತಲಾ ಪ್ರಭು ಅವರಲ್ಲಿ ಒತ್ತಾಯಿಸಿದ್ದರು ಈ ಸಂದರ್ಭ ಆಕೆ ಪತಿ, ಪುತ್ರನನ್ನು ಕಛೇರಿಗೆ ಕರೆಸಿಕೊಂಡಿದ್ದರು.

ಅಶ್ರಫ್ , ಚಂದ್ರಹಾಸ, ರಾಜೇಶ್ ಪ್ರಭು, ಸುಧೀಂದ್ರ ಪ್ರಭು ನಡುವೆ ಈ ವಿಚಾರವಾಗಿ ಮಾತಿನ ಚಕಮಕಿ ನಡೆದು ವಾಗ್ವಾದಕ್ಕೆ ಕಾರಣವಾಗಿದೆ. ಮಾಲಕ ರಾಜೇಶ್ ಪ್ರಭು ಲೈಸನ್ಸ್ ಹೊಂದಿದ ರಿವಾಲ್ವಾರ್ ಹೊಂದಿದ್ದು, ಅಶ್ರಫ್ ಹಾಗೂ ಚಂದ್ರಹಾಸರಿಗೆ ಗುರಿಯಿಟು ಎರಡು ಸುತ್ತು ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.
ಆದರೇ ಗುಂಡು ಗುರಿ ತಪ್ಪಿ ಕೆಲಸದಾಳುಗಳ ಜತೆ ಜಗಳವಾಡುತಿದ್ದ ಸ್ವಂತ ಮಗ ಸುಧೀಂದ್ರನಿಗೆ ತಾಗಿದ್ದು ಆತನ ಎಡಗಣ್ಣಿನ ಪಕ್ಕ ಹಾದು, ತಲೆಯ ಒಳಭಾಗದಲ್ಲಿ 7-8 ಇಂಚು ಆಳದಲ್ಲಿ ಗಾಯ ಮಾಡಿತ್ತು. ಗಂಭೀರ ಗಾಯಗೊಂಡ ಪುತ್ರನನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಶೂಟೌಟ್‌ನಲ್ಲಿ ಪುತ್ರನಿಗೆ ಮೆದುಳು ನಿಷ್ಕ್ರಿಯಗೊಂಡ ವಿಷಯ ತಿಳಿಯುತ್ತಿದ್ದಂತೆ ಉದ್ಯಮಿ ರಾಜೇಶ್ ಪ್ರಭುಗೆ ಹೃದಯಾಘಾತ ಸಂಭವಿಸಿತ್ತು. ಆತನನ್ನು ಪೊಲೀಸ್ ವಶದಲ್ಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರ ಬೆಳಗ್ಗೆಯ ವೇಳೆಗೆ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ರಾಜೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ನೌಕರರ ಮೇಲಿನ ಸಿಟ್ಟು, ಜುಜುಬಿ ನಾಲ್ಕು ಸಾವಿರ ದುಡ್ಡಿನ ವಿಚಾರ ಆಗರ್ಭ ಶ್ರೀಮಂತ ರಾಜೇಶ್ ಪ್ರಭುವನ್ನು ಈಗ ಕಟಕಟೆಯಲ್ಲಿ ನಿಲ್ಲುವಂತೆ ಮಾಡಿದೆ. ವೈಷ್ಣವಿ ಕಾರ್ಗೋ ಸಂಸ್ಥೆಯು ಮಂಗಳೂರು, ಬೆಂಗಳೂರು ಸೇರಿ ಮಹಾರಾಷ್ಟ್ರ, ತಮಿಳುನಾಡು, ಗುಜರಾತ್ ನಲ್ಲಿ ಕಚೇರಿ ಹೊಂದಿದ್ದು ನೂರಾರು ಕಾರ್ಗೋ ವಾಹನಗಳನ್ನು ಹೊಂದಿದ್ದು ಕೋಟ್ಯಂತರ ರೂಪಾಯಿ ಟ್ರಾನ್ಸ್ ಪೋರ್ಟ್ ವ್ಯವಹಾರ ನಡೆಸುತ್ತಿದ್ದವು.

ಇಬ್ಬರು ಮಕ್ಕಳು
ರಾಜೇಶ್ ಪ್ರಭು ತನಗೆ ಜೀವ ಬೆದರಿಕೆ ಹೊಂದಿದ್ದ ಹಿನ್ನೆಲೆಯಲ್ಲಿ ಲೈಸನ್ಸ್ ಹೊಂದಿರುವ ಪಿಸ್ತೂಲ್ ಪಡೆದಿದ್ದರು. 2022, ಜುಲೈ ವರೆಗೆ ಪಿಸ್ತೂಲ್ ಲೈಸನ್ಸ್ ಇದೆ. ರಾಜೇಶ್ ಪ್ರಭು- ಶಾಂತಲಾ ಪ್ರಭು ದಂಪತಿ ಒಬ್ಬಳು ಪುತ್ರಿ ಮತ್ತು ಒಬ್ಬ ಪುತ್ರನನ್ನು ಹೊಂದಿದ್ದರು.