ನವದೆಹಲಿ(ಜು.16): 45 ರ ಹರೆಯದ ಯುವ ನಾಯಕ, ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲೆಟ್ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನೂತನ ಅಧ್ಯಕ್ಷರಾಗಿ ನೇಮಕವಾಗುವ ಸಾಧ್ಯತೆ ಇದೆ ಎಂಬ ಸುದ್ದಿ ಕಾಂಗ್ರೇಸ್ ಪಡಸಾಲೆಯಲ್ಲಿ ವ್ಯಾಪಕವಾಗಿ ಹಬ್ಬಿದೆ. ಕಾಂಗ್ರೇಸ್ ಪಕ್ಷದ ಪುನಶ್ಚೇತನದ ಭಾಗವಾಗಿ ಕಾಂಗ್ರೇಸ್ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗುತ್ತಿದೆ.
2017ರಲ್ಲಿ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕವಾಗಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿನ ಹೀನಾಯ ಸೋಲಿನ ಹೊಣೆ ಹೊತ್ತು ಅಧ್ಯಕ್ಷ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದ್ದರು. ಆನಂತರ ಹಂಗಾಮಿ ಅಧ್ಯಕ್ಷರನ್ನಾಗಿ ಸೋನಿಯಾ ಗಾಂಧಿ ಅವರನ್ನು ನೇಮಕ ಮಾಡಲಾಗಿತ್ತು. ಅಧ್ಯಕ್ಷ ಚುನಾವಣೆ ನಡೆಸುವ ಕುರಿತು ಕಾಂಗ್ರೆಸ್ ಪದೇ ಪದೇ ಹೇಳುತ್ತಿದೆಯಾದರೂ ಆ ಪ್ರಕ್ರಿಯೆ ಕೋವಿಡ್, ಮತ್ತಿತರ ಕಾರಣಗಳಿಂದಾಗಿ ಮುಂದಕ್ಕೆ ಹೋಗುತ್ತಿದೆ.
ನೂತನ ಅಧ್ಯಕ್ಷರ ನೇಮಕ ಹಾಗೂ ಕಾಂಗ್ರೇಸ್ ಪಕ್ಷದ ಕಾರ್ಯ ಶೈಲಿಯಲ್ಲಿ ಬದಲಾವಣೆ ಮಾಡಬೇಕೆಂದು ಅಗ್ರಹಿಸಿ ಪಕ್ಷದ 23 ಹಿರಿಯ ನಾಯಕರು ಗಾಂಧಿ ಕುಟುಂಬದೊಂದಿಗೆ ಮುನಿಸಿಕೊಂಡಿದ್ದು, ತಮ್ಮದೇ ಆದ ಜಿ -23 ಎಂಬ ಗುಂಪೂಂದನ್ನು ಅನಧಿಕೃತವಾಗಿ ಕಟ್ಟಿಕೊಂಡಿದ್ದಾರೆ. ಪಕ್ಷಕ್ಕೆ ಈ ಹಳೇ ತಲೆಮಾರು, ಹಿರಿಯ ನಾಯಕರು ಹೊರೆಯಾಗುತ್ತಿದ್ದಾರೆ. ಇವರಿಗೆ ಅಡಳಿತ ನಡೆಸಿ ಅನುಭವವಿದೆಯೇ ಹೊರತು, ಪಕ್ಷ ಸಂಘಟಿಸಿ ಅನುಭವವಿಲ್ಲ. ತಳ ಮಟ್ಟದ ಕಾರ್ಯಕರ್ತರ ಜತೆ ಸಂಪರ್ಕವಿಲ್ಲ. ಹೀಗಾಗಿಯೇ ಸದ್ಯದ ಪಕ್ಷದ ಸ್ಥಿತಿ ಇಷ್ಟು ಶೋಚನೀಯವಾಗಲು ಕಾರಣ ಎಂದು ಕಂಡುಕೊಂಡಿರುವ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಪಕ್ಷದಲ್ಲಿ ಅಮೊಲಾಗ್ರ ಬದಲಾವಣೆ ತರಲು ಮನ ಮಾಡಿದ್ದಾರೆ ಎನ್ನಲಾಗುತ್ತಿದೆ.
ಹೀಗಾಗಿ ಯುವ ನಾಯಕರ ಹೊಸ ತಂಡವನ್ನು ರಚಿಸಿ , ಹಿರಿಯ ನಾಯಕರನ್ನು ಮಾರ್ಗದರ್ಶಕ ಮಂಡಲಕ್ಕೆ ಸೇರಿಸುವ ನೀಲಿ ನಕ್ಷೆಯತ್ತ ಪಕ್ಷದ ಹೈ ಕಮಾಂಡ್ ಆದ ಗಾಂಧಿ ಕುಟುಂಬ ಚಿಂತನೆ ನಡೆಸಿದೆ. ಪ್ರಿಯಾಂಕ ಗಾಂಧಿಯ ಅತ್ಯಾಪ್ತರಾಗಿರುವ ಸಚಿನ್ ಪೈಲಟ್ ಗೆ ಇದರ ನಾಯಕತ್ವ ನೀಡಲು ಕುಟುಂಬ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಸಚಿನ್ ಪೈಲಟ್ ತಂದೆ ಮಾಜಿ ಕೇಂದ್ರ ಸಚಿವ ದಿ. ರಾಜೇಷ್ ಪೈಲೆಟ್ ಪುತ್ರ. ರಾಜೇಶ್ ಪೈಲೆಟ್ ರವರು ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿಯವರ ಖಾಸ ದೋಸ್ತ್ ಆಗಿದ್ದರು.
ಗಾಂಧಿಯೇತರ ನಾಯಕ
ಗಾಂಧಿಯೇತರರನ್ನು ಪಕ್ಷದ ಅಧ್ಯಕ್ಷ ಮಾಡಿದರೇ, ಆಗ ಬಿಜೆಪಿಯ ಕುಟುಂಬ ರಾಜಕಾರಣದ ಆರೋಪದಿಂದ ತಪ್ಪಿಸಿಕೊಳ್ಳಲು ಕಾರ್ಯಕರ್ತರಿಗೆ ಅವಕಾಶ ಸಿಗುತ್ತದೆ ಎನ್ನುವುದು ಇದರ ಹಿಂದಿನ ಯೋಚನೆ ಎನ್ನಲಾಗಿದೆ. ಅಲ್ಲದೇ, ರಾಜಸ್ಥಾನದಲ್ಲಿ ಪೈಲೆಟ್ ಹಾಗೂ ಅಲ್ಲಿನ ಮುಖ್ಯಮಂತ್ರಿ ಅಶೋಕ್ ಸಿಂಗ್ ಗೆಹ್ಲೋಟ್ ಮಧ್ಯೆ ಅಧಿಕಾರಕ್ಕಾಗಿ ಗುದ್ದಾಟ ನಡೆಯುತ್ತಿದೆ. ಹಾಗಾಗಿ ಅವರನ್ನು ರಾಜ್ಯದಿಂದ ಕೇಂದ್ರಕ್ಕೆ ಶಿಪ್ಟ್ ಮಾಡಿ ಅಲ್ಲಿನ ಭಿನ್ನಮತವನ್ನು ಶಮನ ಮಾಡುವುದು ಈ ಕಾರ್ಯತಂತ್ರದ ಭಾಗವಾಗಿದೆ.
ಹಿಂದಿ ಬೆಲ್ಟ್ ಮುಖಂಡ
ಸಚಿನ್ ಪೈಲೆಟ್ ವರ್ಚಸ್ವಿ ನಾಯಕರಾಗಿದ್ದು , ಹಿಂದಿ ಹಾಗೂ ಇಂಗ್ಲೀಷ್ ಭಾಷೆಯ ಮೇಲೆ ಒಳ್ಳೆ ಹಿಡಿತ ಹೊಂದಿದ್ದಾರೆ. ವರ್ತನೆಯಲ್ಲಿ ಅಕ್ರಮಣಕಾರಿಯಾಗಿದ್ದು, ಮಾತಿನಲ್ಲಿ ಸಂಯಮ ಹೊಂದಿರುವ ಯುವ ಸಮುದಾಯದ ಜತೆ ನೇರವಾಗಿ ಕನೆಕ್ಟ್ ಆಗಬಲ್ಲ ನಾಯಕ. ಸಚಿನ್ ಹಿಂದಿ ಭಾಷಿಗ ಪ್ರದೇಶಕ್ಕೆ ಸೇರಿದವರಾಗಿದ್ದು ಇಲ್ಲಿ ಕಾಂಗ್ರೇಸ್ ತೀರ ಹೀನಾಯ ಸ್ಥಿತಿಯಲ್ಲಿದೆ. ಕಳೆದ ಲೋಕಸಭೆ ಚುಣಾವಣೆಯಲ್ಲಿ ಹಿಂದಿ ಭಾಷಿಗ ಪ್ರದೇಶದ 191 ( ಉತ್ತರ ಪ್ರದೇಶ, ಬಿಹಾರ, ರಾಜ ಸ್ತಾನ, ದೆಹಲಿ, ರಾಜಸ್ಥಾನ, ಮಧ್ಯಪ್ರದೇಶ, ಹರ್ಯಾನ) ಸೀಟ್ ಗಳಲ್ಲಿ ಕಾಂಗ್ರೇಸ್ ಕೇವಲ 5 ಸ್ಥಾನಗಳನ್ನಷ್ಟೇ ಗೆಲ್ಲಲು ಸಾಧ್ಯವಾಗಿತ್ತು. ಹೀಗಾಗಿ ಹಿಂದಿ ಭಾಷಿಗ ಪ್ರದೇಶವರನ್ನೇ ಅಧ್ಯಕ್ಷರನ್ನಾಗಿಸುವ ಮೂಲಕ ಅಲ್ಲಿ ಪಕ್ಷದ ವರ್ಚಸ್ವು ಹೆಚ್ಚಿಸಬಹುದು ಎನ್ನುವ ಲೆಕ್ಕಚಾರವೂ ಈ ಮೂಲಕ ಕಾಂಗ್ರೇಸ್ ಹಾಕಿಕೊಂಡಿದೆ ಎನ್ನಲಾಗಿದೆ.

ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯರಾಗಿರುವ ಇವರು ಯುವ ಸಮುದಾಯದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವುದು ಅವರಿಗಿರುವ ಪ್ಲಸ್ ಪಾಯಿಂಟ್. ಅಲ್ಲದೇ, 5 ವರ್ಷಗಳ ಹಿಂದೆ ರಾಜಸ್ಥಾನ ಕಾಂಗ್ರೇಸ್ ಘಟಕದ ಅಧ್ಯಕ್ಷರಾಗಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದ ಕೀರ್ತಿಯೂ ಅವರಿಗೆ ಸಲ್ಲುತ್ತದೆ.
ಪ್ರಶಾಂತ್ ಕಿಶೋರ್ ಐಡಿಯಾ
ಚುಣಾವಣ ಚಾಣಕ್ಷ್ಯ ಪ್ರಶಾಂತ್ ಕಿಶೋರ್ ಸೂಚನೆಯಂತೆ ಕಾಂಗ್ರೇಸ್ ಹೈಕಮಾಂಡ್ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಗಾಂಧಿ ಕುಟುಂಬ ಮತ ತರುವ ಛರಿಷ್ಮಾವನ್ನು ಬಹುತೇಕ ಕಳಕೊಂಡಿರುವುದರಿಂದ, ಆದರೇ ಗಾಂಧಿ ಕುಟುಂಬದ ಆಸರೆಯಿಲ್ಲದೇ ಕಾಂಗ್ರೇಸ್ ಛಿದ್ರವಾಗುವ ಸಾಧ್ಯತೆಯಿರುವುದರಿಂದ , ಗಾಂಧಿ ಕುಟುಂಬಕ್ಕೆ ಅತ್ಯಾಪ್ತನಾಗಿರುವ ವ್ಯಕ್ತಿಯನ್ನೆ ಅಧ್ಯಕ್ಷ ಪದವಿಗೆ ನೇಮಕ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಕನ್ನಯ ಕುಮಾರ್ , ಜಿಗ್ನೇಶ್ ಮೇವಾನಿಯಂತಹ ಯುವ ನಾಯಕರನ್ನು ಪಕ್ಷಕ್ಕೆ ಕರೆ ತರಲಾಗಿದ್ದು , ಇನ್ನು ನಾಯಕತ್ವವನ್ನು ಗಾಂಧಿಯೇತರ ಯುವ ನಾಯಕನಿಗೆ ನೀಡುವ ಮೂಲಕ ಯುವ ಮತದಾರರನ್ನು ಸೆಳೆಯಲು ಕಾಂಗ್ರೇಸ್ ಯೋಜನೆ ರೂಪಿಸಿದೆ.
ಈ ಆಯ್ಕೆಯನ್ನು ಮುನಿಸಿಕೊಂಡಿರುವ ಜಿ -23 ನಾಯಕರಿಗೆ ತಿಳಿಸಿ ಮನವರಿಕೆ ಮಾಡುವ ಕಾರ್ಯವನ್ನು ಸೋನಿಯಾಗಾಂಧಿಯವರು ನೆಹರು- ಗಾಂಧಿ ಪರಿವಾರದ ಇನ್ನೊಬ್ಬ ನಿಕಟವರ್ತಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಗೆ ವಹಿಸಿದ್ದಾರೆ ಎಂದು ತಿಳಿದು ಬಂದಿದೆ. ಜಿ -23 ನಾಯಕರನ್ನು ಒಪ್ಪಿಸಿ ಚುಣಾವಣೆ ಇಲ್ಲದೇ ಪೈಲಟ್ ಅವರನ್ನು ಅವಿರೋಧವಾಗಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಪಕ್ಷ ಕಾರ್ಯ ಸೂಚಿ ರೂಪಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ ಎಂದು ತಿಳಿದು ಬಂದಿದೆ