ಪೆಟ್ರೋಲ್ ಬಂಕ್ ಮ್ಯಾನೇಜರ್ ಗೆ ಹಲ್ಲೆಗೈದು ಹಾಡುಹಗಲೇ 4.20 ಲಕ್ಷ ರೂ. ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಅ.5 ರಂದು ಮಂಗಳೂರಿನ ಉರ್ವ ಪೊಲೀಸರು ಬಂಧಿಸಿದ್ದಾರೆ.
ಪೆಟ್ರೋಲ್ ಬಂಕ್‌ನ ಮಾಜಿ ಸಿಬ್ಬಂದಿ ಮಂಗಳೂರು ನಗರದ ಶಕ್ತಿ ನಗರ ನಿವಾಸಿ ಶ್ಯಾಮ್ ಶಂಕರ್ (32), ಕುಡುಪು ನಿವಾಸಿ ಅಭಿಷೇಕ್ (26), ಶಕ್ತಿ ನಗರ ನಿವಾಸಿಗಳಾದ ಕಾರ್ತಿಕ್ (23), ಸಾಗರ್ (21) ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳು. ಆರೋಪಿಗಳು ದರೋಡೆ ಮಾಡಿದ ಬಳಿಕ ಮುಂಬಯಿ, ಗೋವಾಕ್ಕೆ ತೆರಳಿ ಮೋಜು ಮಸ್ತಿ ಮಾಡಿದ್ದಾರೆ. ದರೋಡೆಗೈದ ಹಣದಲ್ಲಿ ಮೊಬೈಲ್, ಚಿನ್ನ ಖರೀದಿಸಿದ್ದು ಹುಡುಗಿಯರಿಗಾಗಿಯೂ ಉಪಯೋಗಿಸಿದ್ದಾರೆ.
ಬಂಧಿತ ಆರೋಪಿಗಳ ಪೈಕಿ ಶ್ಯಾಮ್ ಶಂಕರ್ ವಿರುದ್ಧ 2018ರಲ್ಲಿ ದರೋಡೆ ಪ್ರಕರಣವಿದೆ. ಅಭಿಷೇಕ್ ಶಕ್ತಿ ನಗರದವನಾಗಿದ್ದು, ಮುಂಬಯಿ ಬಾರ್‌ನಲ್ಲಿ ಮ್ಯಾನೇಜರ್ ಆಗಿದ್ದಾನೆ. ಈತನ ವಿರುದ್ದ ಕೊಲೆ, ಕೊಲೆ ಯತ್ನ, ದರೋಡೆ, ಹಲ್ಲೆ ಸೇರಿದಂತೆ ನಾನಾ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಶಕ್ತಿ ನಗರ ನಿವಾಸಿ ಕಾರ್ತಿಕ್ ಪೇಂಟಿಂಗ್ ಕೆಲಸ ಮಾಡುತ್ತಿದ್ದು, ಈತನ ಮೇಲೂ ಹಲ್ಲೆ, ಕೊಲೆ ಯತ್ನ, ಎನ್‌ಡಿಪಿಎಸ್ ಕೇಸುಗಳಿವೆ. ಸಾಗರ್ ಕೂಡಾ ಶಕ್ತಿ ನಗರದವನಾಗಿದ್ದು ಈತನ ವಿರುದ್ಧ ಇದು ಮೊದಲ ಪ್ರಕರಣವಾಗಿದೆ.
ವಾರದ ಹಿಂದೆ ಕಾವೂರು ಗಾಂಧಿ ನಗರದ ಆಶೀರ್ವಾದ್ ಪೆಟ್ರೋಲ್ ಪಂಪ್ ಮ್ಯಾನೇಜರ್ ಭೋಜಪ್ಪ (57) ಎಂಬವರು ಉರ್ವ ಚಿಲಿಂಬಿಯಲ್ಲಿರುವ ಬ್ಯಾಂಕ್‌ನ ಖಾತೆಗೆ ತುಂಬಲು ಹಣವನ್ನು ಬ್ಯಾಗಿನಲ್ಲಿಟ್ಟು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಅವರ ಮೇಲೆ ಬ್ಯಾಟ್ ಬೀಸಿ ಹಲ್ಲೆ ನಡೆಸಿ ದುಷ್ಕರ್ಮಿಗಳ ತಂಡ ಹಣವನ್ನು ದೋಚಿತ್ತು.
ಶ್ಯಾಮ್ ಶಂಕರ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು ಈತನೇ ಈತನೇ ಮೂವರ ಜತೆಗೂಡಿ ಕೃತ್ಯವೆಸಗಲು ಸಕೆಚ್ ರೂಪಿಸಿದಾತ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ. ಸೆಪ್ಟೆಂಬರ್ 13ರಂದು ಶಕ್ತಿ ನಗರದಲ್ಲಿ ಈ ನಾಲ್ಕು ಮಂದಿ ಕುಳಿತುಕೊಂಡು ದರೋಡೆಗೆ ಪ್ಲ್ಯಾನ್ ರೂಪಿಸಿದ್ದರು.

ಕೃತ್ಯವೆಸಗಿದ ಆರೋಪಿಗಳು ಮುಂಬಯಿಗೆ ಪರಾರಿಯಾಗಿದ್ದು, ಅಲ್ಲಿ ಸುಲಿಗೆ ಮಾಡಿದ ಹಣವನ್ನು ಬಟವಾಡೆ ಮಾಡಿಕೊಂಡಿದ್ದಾರೆ. ಈ ಹಿಂದೆಯೂ ಇದೇ ರೀತಿ ಕೃತ್ಯವೆಸಗಿದ ಬಳಿಕ ಆರೋಪಿಗಳು ಮುಂಬಯಿ, ಗೋವಾಕ್ಕೆ ತೆರಳಿದ್ದರು ಆರೋಪಿಗಳಿಂದ 60 ಸಾವಿರ ರೂ. ನಗದು, ವಾಹನ, ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ತನಿಖೆಯ ಹಾದಿ ತಪ್ಪಿಸಲು ಆನ್‌ಲೈನ್ ಫುಡ್ ಸರ್ವಿಸ್ ಸಿಬ್ಬಂದಿಯ ರೀತಿ ಡ್ರೆಸ್ ಹಾಕಿದ್ದರು ಎನ್ನುವುದು ತನಿಖೆಯಿಂದ ಬಹಿರಂಗವಾಗಿದೆ.. ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಂಡು ಮತ್ತಷ್ಟು ವಿಚಾರಣೆ ನಡೆಸಲಾಗುವುದು ಎಂದು ಮಂಗಳೂರು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.