ನವದೆಹಲಿ:ಅ 6: ಕಳೆದೊಂದು ವಾರದಿಂದ ತೈಲ ಉತ್ಪಾದನ ಕಂಪನಿಗಳು ಪೆಟ್ರೋಲ್ ಹಾಗೂ ಡಿಸೀಲ್ ದರಗಳನ್ನು ಏರಿಕೆ ಮಾಡುತ್ತಿವೆ. ಅದರ ಜತೆ ಗ್ರಾಹಕ ನಿಗೆ ಮತ್ತೊಂದು ಹೊರೆ ಇಂದಿನಿಂದ ಬಿದ್ದಿದೆ. ಅಡುಗೆ ಅನಿಲ ಸಿಲಿಂಡರ್ ದರವನ್ನು ಕೂಡ ಬುಧವಾರ 15 ರೂಪಾಯಿ ಏರಿಕೆ ಮಾಡಲಾಗಿದೆ. ನೂತನ ದರ ದೇಶಾದ್ಯಂತ ಇಂದೇ ಜಾರಿಗೆ ಬರಲಿದೆ.
ಈ ಮೂಲಕ ಸಬ್ಸಿಡಿಯೇತರ ಅಡುಗೆ ಅನಿಲ ಸಿಲಿಂಡರ್ ದರ ರಾಜಧಾನಿ ದೆಹಲಿಯಲ್ಲಿ 14.2 ಕೆಜಿಗೆ 899 ರೂಪಾಯಿ 50 ಪೈಸೆಯಾಗಿದೆ. 5 ಕೆಜಿ ಸಿಲಿಂಡರ್ ಬೆಲೆ 502 ರೂಪಾಯಿಯಾಗಿದೆ.
ಕಳೆದ ಅಕ್ಟೋಬರ್ 1ರಂದು ಪೆಟ್ರೋಲಿಯಂ ಕಂಪೆನಿಗಳು ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನು 43 ರೂಪಾಯಿ 5 ಪೈಸೆಯಷ್ಟು ಹೆಚ್ಚಳ ಮಾಡಿದ್ದವು. ಇದೀಗ ಅಡುಗೆ ಅನಿಲ ಸಿಲಿಂಡರ್ ದರವನ್ನು ಕೂಡ ಹೆಚ್ಚಿಸುವ ಮೂಲಕ ಗ್ರಾಹಕರಿಗೆ ಮತ್ತಷ್ಟು ಶಾಕ್ ನೀಡಿದೆ.
ದೆಹಲಿಯಲ್ಲಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ (LPG Cylinder Price) ಈ ವರ್ಷ ಜನವರಿಯಲ್ಲಿ 694 ರೂ. ಇತ್ತು, ಇದನ್ನು ಫೆಬ್ರವರಿಯಲ್ಲಿ ಪ್ರತಿ ಸಿಲಿಂಡರ್‌ಗೆ 719 ರೂ.ಗೆ ಹೆಚ್ಚಿಸಲಾಯಿತು. ಫೆಬ್ರವರಿ 15 ರಂದು ಬೆಲೆಯನ್ನು 769 ರೂ.ಗೆ ಹೆಚ್ಚಿಸಲಾಯಿತು. ಇದರ ನಂತರ, ಫೆಬ್ರವರಿ 25 ರಂದು, ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 794 ರೂ. ತಲುಪಿತು. ಮಾರ್ಚ್‌ನಲ್ಲಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 819 ರೂ.ಗೆ ಏರಿಸಲಾಯಿತು.

ಈ ಮೊದಲು ಜುಲೈ, ಆಗಸ್ಟ್ ಹಾಗೂ ಸೆಪ್ಟಂಬರ್ ತಿಂಗಳಿನಲ್ಲಿ ಕೂಡ ಗ್ಯಾಸ್ ಸಿಲಿಂಡರ್ ಬೆಲೆಗಳನ್ನು ಹೆಚ್ಚಿಸಲಾಗಿತ್ತು. ಮೇ ಮತ್ತು ಜೂನ್‌ನಲ್ಲಿ ದೇಶೀಯ ಸಿಲಿಂಡರ್‌ಗಳ ಬೆಲೆಯಲ್ಲಿ (Cylinder Price) ಯಾವುದೇ ಬದಲಾವಣೆಯಾಗಿಲ್ಲ. ಏಪ್ರಿಲ್‌ನಲ್ಲಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 10 ರೂಪಾಯಿ ಕಡಿತಗೊಳಿಸಲಾಗಿತ್ತು.