ಮಂಗಳೂರು, ಅ.4: ಬೈಕ್ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಕ್ ಸವಾರನಿಗೆ ಆರು ತಿಂಗಳ ಸಾದಾ ಶಿಕ್ಷೆ ಮತ್ತು 6 ಸಾವಿರ ರೂ. ದಂಡವಿಧಿಸಿ ಮಂಗಳೂರಿನ ಎರಡನೇ ಜೆಎಂಎಫ್‌ಸಿ ನ್ಯಾಯಾಲಯ ತೀರ್ಪು ನೀಡಿದೆ.
ಪ್ರಕರಣವೂ ಮಂಗಳೂರಿನ ಮುಕ್ಕ ಚೆಕ್ ಪೊಸ್ಟ್ ಬಳಿ 2017ರ ಆಗಸ್ಟ್ 30ರಂದು ಬೆಳಿಗ್ಗೆ ಘಟಿಸಿತ್ತು. ವಾರಿಜಾ ಎಂಬ ಪಾದಚಾರಿ ಮಹಿಳೆ ರಸ್ತೆ ದಾಟುತಿದ್ದಾಗ ಗೌತಮ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಬೈಕ್ ಆಕೆಗೆ ಡಿಕ್ಕಿ ಹೊಡೆದ ಬಗ್ಗೆ ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಾರಿಜಾ ಅವರನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷೆ ನಡೆಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದರು. ಅಪಘಾತದ ತನಿಖೆ ನಡೆಸಿ ಆರೋಪಿ ಗೌತಮ್ ವಿರುದ್ಧ ಆಗಿನ ಪೊಲೀಸ್ ನಿರೀಕ್ಷಕ ಮಂಜುನಾಥ್ ಜೆಎಂಎಫ್‌ಸಿ ಎರಡನೇ ನ್ಯಾಯಾಲಯದಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವೂ ಪ್ರಾಷಿಕ್ಯೂಷನ್ ಆರೋಪ ಸಾಬೀತು ಮಾಡಿದೆ ಎಂಬ ಅಭಿಪ್ರಾಯಕ್ಕೆ ಬಂದಿದೆ. ಈ ಹಿನ್ನಲೆಯಲ್ಲಿ ಗೌತಮ್ ಗೆ ಆರು ತಿಂಗಳ ಸಾದಾ ಶಿಕ್ಷೆ ಮತ್ತು 6 ಸಾವಿರ ರೂ. ದಂಡವಿಧಿಸಿ ನ್ಯಾಯಾಧೀಶೆ ಅಂಜಲಿ ಶರ್ಮ ತೀರ್ಪು ನೀಡಿದ್ದಾರೆ. ದಂಡ ಪಾವತಿಸಲು ತಪ್ಪಿದಲ್ಲಿ ಹೆಚ್ಚುವರಿ ಮೂರು ತಿಂಗಳು 10 ದಿನ ಸಾದಾ ಶಿಕ್ಷೆ ಅನುಭವಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.