ಬಸ್ಸಿಳಿದು ತೆರಳುತ್ತಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ರೋಡ್ ರೋಮಿಯೊನೊಬ್ಬ ಐ ಲವ್ ಯೂ ಹೇಳಿದ, ಬಿಗಿದಪ್ಪಿಕೊಳ್ಳಲು ಯತ್ನಿಸಿದ ಹಾಗೂ ಅಶ್ಲೀಲವಾಗಿ ಸನ್ನೆ ಮಾಡಿ ಕಿರುಕುಳ ನೀಡಿದ ಘಟನೆ ಅ. 10 ರಂದು ಉಳ್ಳಾಲದ ಹರೇಕಳ ಎಂಬಲ್ಲಿ ನಡೆದಿದೆ. ಕೃತ್ಯ ಎಸಗಿದ ಆರೋಪಿಯನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಅಡ್ಯಾರ್ ಕಣ್ಣೂರು ನಿವಾಸಿ ಯಾಕೂಬ್ ( 43) ಬಂಧಿತ ಆರೋಪಿ . ಈತನ ಮೇಲೆ ಈ ಹಿಂದೆಯೂ ಕೆಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಕೊಣಾಜೆ ಪರಂಡೆಯ ಉಳ್ಳಾಳ್ತಿ ಅಮ್ಮನವರ ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನಿಸಿ ಬಳಿಕ ಮಾನಸಿಕ ಅಸ್ವಸ್ತನಂತೆ ನಟಿಸಿದ ಎಂಬ ಆರೋಪವು ಕೇಳಿ ಬಂದಿತ್ತು.
ಇಂದು ಮಧ್ಯಾಹ್ನ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಹರೇಕಳ ಗ್ರಾಮದ ಮಿಷನ್ ಕಂಪೌಂಡ್ ಬಸ್ ನಿಲ್ದಾಣದಲ್ಲಿ ಇಳಿದು ಮನೆಯತ್ತ ನಡೆದುಕೊಂಢು ಹೋಗುತಿದ್ದ ವೇಳೆ ಘಟನೆ ನಡೆದಿದೆ. ಆಕೆಯನ್ನು ಈ ವೇಳೆ ಅಡ್ಡಗಟ್ಟಿದ ಆರೋಪಿ ಐ ಲವ್ ಯೂ ಎಂದಿದ್ದಾನೆ. ಬಳಿಕ ಆಕೆಯನ್ನು ಅಪ್ಪಿಕೊಳ್ಳಲು ಯತ್ನಿಸಿದ್ದು ಆಗ ವಿದ್ಯಾರ್ಥಿನಿ ಕೊಸರಾಡಿ ತಪ್ಪಿಸಿಕೊಂಡು ಅಲ್ಲಿಂದ ಓಡಿ ಹೋಗಿದ್ದಾಳೆ ಎಂದು ಹೇಳಲಾಗಿದೆ.

ಈ ವೇಳೆ ಅಲ್ಲೇ ಪಕ್ಕದ ಪೊದೆಯ ಮಧ್ಯೆ ಅಡಗಿ ಕುಳಿತ ಆರೋಪಿಯು ಅಶ್ಲೀಲ ಸನ್ನೆ ಮಾಡಿದ್ದು ಭಯಭೀತಳಾದ ವಿದ್ಯಾರ್ಥಿನಿ ಕಿರುಚಾಡಿದ್ದಾಳೆ ಬೊಬ್ಬೆ ಕೇಳಿದ ಸ್ಥಳೀಯರು ಬಂದಾಗ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಕ ಆತನನ್ನು ಎಲಿಯಾರ್ ಪದವು ಎಂಬಲ್ಲಿ ಪತ್ತೆ ಹಚ್ಚಿದ ಗ್ರಾಮಸ್ಥರು ಕೊಣಾಜೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಪೊಲೀಸರು ದೂರು ಸ್ವೀಕರಿಸಿ ತನಿಖೆ ನಡೆಸುತ್ತಿದ್ದಾರೆ