ವರದಕ್ಷಿಣೆ ಪಡೆದು ಮದುವೆಯಾಗಿ ಮಗು ಹುಟ್ಟಿದ ಬಳಿಕ ವಂಚಿಸಿ ಪತಿ ಬಿಟ್ಟು ಹೋಗಿದ್ದಾನೆ. ಹಾಗೂ ತನ್ನನ್ನೂ ವಿವಾಹವಾಗುವ ಮೊದಲು ಮತ್ತು ಬಳಿಕ ಕೂಡ ಬೇರೆ ಮದುವೆಯಾಗಿ ಅದನ್ನು ತನ್ನಿಂದ ಮರೆಮಾಚಿ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಮಂಗಳೂರು ಮಹಿಳಾ ಪೊಲೀಸ್ ಠಾಣೆಗೆ ಅ 4 ರಂದು ದೂರು ನೀಡಿದ್ದಾರೆ.
ಮೂಡುಬಿದಿರೆ ಬೆಳುವಾಯಿಯ ಮಹಿಳೆ ದೂರು ನೀಡಿದ ವಿವಾಹಿತೆ. ಬೆಂಗಳೂರು ಮೂಲದ ರಾಘವೇಂದ್ರ ಕುಲಕರ್ಣಿ ಮೋಸ ಮಾಡಿದ ಆರೋಪಿ. ಬೆಳುವಾಯಿಯ ಮಹಿಳೆಯನ್ನು ಮದುವೆಯಾಗುವ ಮೊದಲು ಈತ ಬೇರೊಬ್ಬ ಮಹಿಳೆಯನ್ನು ವಿವಾಹವಾಗಿ ವಿಚ್ಚೇಧನ ಪಡೆದು ಅದನ್ನು ಗುಪ್ತವಾಗಿಟ್ಟಿದ್ದ. ಇದೀಗ ಮತ್ತೆ ಆತ ಇನ್ನೊಂದು ಮದುವೆಯಾಗಿದ್ದು ಅದನ್ನು ಕೂಡ ಮುಚ್ಚಿಟ್ಟಿದ್ದಾನೆ .ಹೀಗೆ ಆರೋಪಿ ರಾಘವೇಂದ್ರ ಕುಲಕರ್ಣಿ ತನಗೆ ವಂಚಿಸಿದ್ದಾನೆ ಎಂದು ಆ ಮಹಿಳಾ ಠಾಣೆಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ದೂರಿನಲ್ಲಿ ಏನಿದೆ?
ಆರೋಪಿ ರಾಘವೇಂದ್ರ ಕುಲಕರ್ಣಿ ಬೆಂಗಳೂರಿನ ರಾಘವೇಂದ್ರ ಮಠದಲ್ಲಿ ಹಿಂದೂ ಸಂಪ್ರದಾಯದಂತೆ 2017ರಲ್ಲಿ ಜೂನ್ ತಿಂಗಳಿನಲ್ಲಿ ಬೆಳುವಾಯಿಯ ಮಹಿಳೆಯನ್ನು ವಿವಾಹವಾಗಿದ್ದ. ಈ ಸಂದರ್ಭ ವರದಕ್ಷಿಣೆ ರೂಪದಲ್ಲಿ 1 ಲಕ್ಷ ರೂಪಾಯಿಯನ್ನು ಯುವತಿ ಕಡೆಯವರು ನೀಡಿದ್ದರು. ವಿವಾಹದ ಬಳಿಕ ರಾಘವೇಂದ್ರ ಪತ್ನಿಗೆ ದೈಹಿಕ, ಮಾನಸಿಕ ಹಿಂಸೆ ನೀಡಲಾರಂಭಿಸಿದ್ದಾನೆ. ಗರ್ಭಿಣಿಯಾದ ಸಂದರ್ಭದಲ್ಲಿ ಪತ್ನಿ ತವರಿಗೆ ತೆರಳಿದ್ದರು. ಈ ವೇಳೆ ಮಗು ಜನಿಸಿದೆ. ಮರಳಿ ತವರು ಮನೆಯಿಂದ ಪತ್ನಿ, ಮಗುವನ್ನು ಕರೆದುಕೊಂಡು ಬರಲು ಆತ ಹೋಗಿಲ್ಲ.

ಆ ಬಳಿಕ ದೂರುದಾರೆ ಮಹಿಳೆಯ ತಾಯಿ, ಸಂತ್ರಸ್ತೆ ಹಾಗೂ ಆಕೆಯ ಮಗುವನ್ನು ಬೆಂಗಳೂರಿನ ರಾಘವೇಂದ್ರನ ಮನೆಯಲ್ಲಿ ಬಿಟ್ಟು ಬಂದಿದ್ದಾರೆ. ಅಲ್ಲಿಂದ ಮತ್ತೆ ಪತ್ನಿ ಹಾಗೂ ಮಗುವನ್ನು ತವರು ಮನೆಗೆ ಆರೋಪಿಯೂ ಕಳುಹಿಸಿದ್ದಾನೆ . ಬಳಿಕ ಪತ್ನಿ ಹಲು ಬಾರಿ ಪೋನ್ ಮಾಡಿದಾಗ ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲ. ಹೀಗಾಗಿ ಮಹಿಳೆಯ ಕಡೆಯವರು ಈತನ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.
ಈ ವೇಳೆ ಈತ ವಿವಾಹಕ್ಕೂ ಮೊದಲು ಬೇರೊಬ್ಬ ಮಹಿಳೆಯನ್ನು ಮದುವೆಯಾಗಿರುವುದು ಹಾಗೂ ವಿಚ್ಚೇಧನ ಕೊಟ್ಟಿರುವುದು ಬೆಳಕಿಗೆ ಬಂದಿದೆ. ಅಲ್ಲದೇ, ಬೆಂಗಳೂರಿನಲ್ಲಿ ತೆರಳಿ ನೋಡಿದಾಗ ಆತ ಇತ್ತೀಚೆಗೆ ಮತ್ತೊಂದು ವಿವಾಹವಾಗಿರುವುದು ಪತ್ತೆಯಾಗಿದೆ.