ಮಂಗಳೂರು: ಸುಳ್ಯ ನ್ಯಾಯಾಲಯದ ವಿಚಾರಣೆಯಲ್ಲಿ ಹಾಜರಾಗುವ ನಿಮಿತ್ತ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಇಂದು ಮಂಗಳೂರಿಗೆ ಆಗಮಿಸಿದ್ದಾರೆ. ಸುಳ್ಯದ ವ್ಯಕ್ತಿಯೊಬ್ಬರ ಜತೆ ಡಿಕೆಶಿಯವರು ನಡೆಸಿದ ಫೋನ್ ಸಂಭಾಷಣೆಯ ಬಗ್ಗೆ ಸಾಕ್ಷ್ಯ ನುಡಿಯಲು ಅವರಿಂದು ಸುಳ್ಯ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ.
ಈ ಸಂಬಂಧ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು ನಾನು ಇಂಧನ ಸಚಿವನಾಗಿದ್ದಾಗ ಯಾರೋ ಒಬ್ಬ ತರ್ಲೆ ಫೋನ್ ಮಾಡಿದ್ದ. ನನ್ನ ಜೊತೆ ಬಾಯಿಗೆ ಬಂದ ಹಾಗೆ ಮಾತನಾಡಿದ್ದ. ಅವಾಚ್ಯ ಶಬ್ದಗಳಿಂದ ನನಗೆ ಬೈದಿದ್ದ. ನಮ್ಮ ಅಧಿಕಾರಿಗಳು ಅವನ ವಿರುದ್ಧ ದೂರು ನೀಡಿದ್ದರು. ಈ ವೇಳೆ ಅಧಿಕಾರಿಗಳಿಗೂ ಬಾಯಿಗೆ ಬಂದ ಹಾಗೇ ಬೈದಿದ್ದ ಎಂದರು.
ಈ ವಿಚಾರವಾಗಿ ಸಾಕ್ಷಿ ಹೇಳಲು ಬರಬೇಕು ಅಂತಾ ನ್ಯಾಯಾಲಯ ಹೇಳಿತ್ತು. ಪ್ರಾರಂಭದಲ್ಲಿ ನನಗೂ ಈ ಬಗ್ಗೆ ಗೊತ್ತಾಗಲಿಲ್ಲ. ನಮಗೆಲ್ಲಾ ಈ ವಿಚಾರದಲ್ಲಿ ಸ್ವಲ್ಪ ತಿಳುವಳಿಕೆ ಕಡಿಮೆ. ಲುಕ್ ಔಟ್ ನೋಟಿಸ್ ಪೇಪರ್ ನಲ್ಲಿ ಹಾಕಿದ್ದಾರೆ ಆರ್ಡರ್ ಮಾಡಿದ್ದಾರೆ ಅಂತಾ ಗೊತ್ತಾಯ್ತು. ಕೋರ್ಟ್ ಆದೇಶಕ್ಕೆ ತಲೆ ಬಾಗಿ ಬಂದಿದ್ದೇನೆ. ನಾವೇ ಕಾನೂನು ಮಾಡಿದವರು, ಕಾನೂನಿಗೆ ಬೆಲೆ ನೀಡದಿದ್ದರೆ ಹೇಗೆ ಎಂದು ಡಿಕೆಶಿ ಪ್ರಶ್ನಿಸಿದರು.

ಏನಿದು ಪ್ರಕರಣ?
ವಿದ್ಯುತ್ ಸಮಸ್ಯೆ ಕುರಿತು 2016ರಲ್ಲಿ ಸುಳ್ಯ ತಾಲೂಕಿನ ಬೆಳ್ಳಾರೆ ನಿವಾಸಿ ಸಾಯಿ ಗಿರಿಧರ್ ಮತ್ತು ಅಂದಿನ ಇಂಧನ ಸಚಿವ ಡಿ.ಕೆ. ಶಿವಕುಮಾರ್ ನಡುವೆ ಬಿಸಿ ಬಿಸಿ ಪೋನ್ ಸಂಭಾಷಣೆ ನಡೆದಿತ್ತು. ಈ ಕುರಿತು ಡಿಕೆಶಿ ಸೂಚನೆಯಂತೆ ಮೆಸ್ಕಾಂ ಅಧಿಕಾರಿಯೊಬ್ಬರು ಈ ಬಗ್ಗೆ ಸುಳ್ಯ ಠಾಣೆಯಲ್ಲಿ ದೂರು ದಾಖಲಿಸಿದರು. ಈ ದೂರಿನ ಆಧಾರದಲ್ಲಿ ಸಾಯಿ ಗಿರಿಧರ್ ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿತ್ತು.
ಸಂಭಾಷಣೆಯ ಪ್ರಕರಣ ಸಂಬಂಧ ಸಾಕ್ಷ್ಯ ಹೇಳಲು ಡಿಕೆಶಿ ಅವರಿಗೆ ಹಲವು ಬಾರಿ ಸಮನ್ಸ್ ಜಾರಿ ಮಾಡಲಾಗಿತ್ತು. ಆದರೆ ಡಿಕೆಶಿ ಮಾತ್ರ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸುಳ್ಯ ನ್ಯಾಯಾಲಯ ವಾರೆಂಟ್ ಜಾರಿ ಮಾಡಿತ್ತು.

ಕೋರ್ಟಿಗೆ ಹಾಜರಾಗದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಧೀಶರು ಡಿಕೆಶಿ ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸಲು ಐಜಿಪಿ ಹಾಗೂ ಡಿಐಜಿಗೆ ನೋಟಿಸ್ ಜಾರಿ ಮಾಡುವಂತೆ ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಡಿಕೆಶಿ ಇಂದು ಕೋರ್ಟಿಗೆ ಹಾಜರಾಗಲು ಮಂಗಳೂರಿಗೆ ಬಂದಿದ್ದಾರೆ.
ಇದನ್ನೂ ಓದಿ | ವಾರಂಟ್ ಜಾರಿಯಾದ ಬಳಿಕ ಅ. 5 ರಂದು ಸುಳ್ಯ ನ್ಯಾಯಾಲಯಕ್ಕೆ ಸಾಕ್ಷ್ಯ ನುಡಿಯಲು ಹಾಜರಾಗುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್