ಬೆಂಗಳೂರು: ಅ 4: ದೇಶದಲ್ಲಿ ನೀಚ ಆಡಳಿತವಿದೆ. ರಾಮರಾಜ್ಯ ಮಾಡ್ತೇವೆ ಅಂತ ಹೇಳಿದವರು ರಾವಣ ರಾಜ್ಯ ಮಾಡಲು ಹೊರಟಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಜೆಪಿ ವಿರುದ್ದ ವಾಗ್ದಾಳಿ ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಲಖೀಂಪುರದಲ್ಲಿ ನಡೆದಿರುವ ಹಿಂಸಾಚಾರವನ್ನು ಅವರು ಕಟುವಾಗಿ ಖಂಡಿಸಿದ್ದಾರೆ.
ಉತ್ತರ ಪ್ರದೇಶದ ಹಿಂಸಾಚಾರದಲ್ಲಿ ಮೃತಪಟ್ಟ ಕುಟುಂಬದ ಬೇಟಿ ಮಾಡಲು ಹೊರಟು ನಿಂತಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಮಾರ್ಗ ಮಧ್ಯೆ ಬಂಧಿಸಿರುವುದನ್ನು ಟೀಕಿಸಿದ ಅವರು ಖಂಡಿಸಿದ್ದು, ಪ್ರಿಯಾಂಕಾ ಮಾಡಿದ ತಪ್ಪು ಏನು ಅನ್ನೋದನ್ನ ಯುಪಿ ಸರ್ಕಾರ ಹೇಳಬೇಕು ಎಂದು ಅಗ್ರಹಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಡಿಕೆಶಿ ಸುದ್ದಿಗೋಷ್ಠಿ ನಡೆಸಿದ್ದು , ದೇಶದ ಅನ್ನದಾತನಿಗೆ ರಕ್ಷಣೆ ಇಲ್ಲ. ತನ್ನ ರಕ್ಷಣೆಗಾಗಿ ನಿರಂತರವಾಗಿ ಹೋರಾಟ ಮಾಡ್ತಿದ್ದಾನೆ. ಆ ರೈತರನ್ನು ಬಿಜೆಪಿ ಮಂತ್ರಿ ಮತ್ತು ಅವರ ಕುಟುಂಬದವರು ಕೊಲೆ ಮಾಡಿದ್ದಾರೆ. ಒಟ್ಟು ಎಂಟು ಜನ ಸತ್ತಿದ್ದಾರೆ. ಈ ಘಟನೆಗೆ ನೈತಿಕ ಹೊಣೆ ಹೊತ್ತು ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ಸಚಿವ ರಾಜೀನಾಮೆ ಕೊಟ್ಟು ಕ್ಷಮೆ ಕೇಳಬೇಕು ಎಂದರು.

ಇದು ಇಡೀ ದೇಶದ ರೈತ ಸಮುದಾಯದ ಕೊಲೆ. ಪ್ರಜಾಪ್ರಭುತ್ವದ ಕೊಲೆ. ರೈತರ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳೂಕೆ ಹೋದ ಪ್ರಿಯಾಂಕ ಗಾಂಧಿ ಅವರನ್ನ ತಡೆಯುತ್ತಾರೆ. ಮಧ್ಯರಾತ್ರಿಯಲ್ಲಿ ಯುಪಿ ಪೊಲೀಸರು ಅವರ ಮೈಮೇಲೆ ಕೈಹಾಕಿ ಎಳೆದಾಡಿದ್ದಾರೆ. ಇದು ಭಾರತದ ಪ್ರತಿಯೊಂದು ಹೆಣ್ಣು ಮಗಳಿಗೂ ಆದ ಅವಮಾನ ಎಂದು ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಪ್ರಿಯಾಂಕಾರನ್ನು ಬಂಧಿಸಿರುವುದು ಖಂಡನೀಯ. ಕಾಂಗ್ರೆಸ್ ಅವರ ಬೆನ್ನೆಲುಬಾಗಿ ನಿಲ್ಲುತ್ತೆ ಎಂದು ಡಿಕೆಶಿ, ‘ಆ ಹೆಣ್ಣು ಮಗಳ ಮೇಲೆ ಕೈ ಹಾಕೋ ಅಧಿಕಾರ ಕೊಟ್ಟವರು ಯಾರು? ಮನೆಯಿಂದ ಅರೆಸ್ಟ್ ಮಾಡಕ್ಕೆ ಅಧಿಕಾರ ಕೊಟ್ಟವರು ಯಾರು? ದೇಶದಲ್ಲಿ ಇರುವುದು ನೀಚ ರಾವಣ ರಾಜ್ಯ. ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡ್ತೀವಿ’ ಎಂದರು. ಇಡೀ ದೇಶದ ಜನ ನಿಮ್ಮ ಜತೆ ಇದ್ದಾರೆ. ಹೆದರಬೇಡಿ ಮುನ್ನುಗ್ಗಿ ಎಂದು ರಾಹುಲ್, ಸೋನಿಯಾ, ಪ್ರಿಯಾಂಕಾಗೆ ಮನವಿ ಮಾಡುತ್ತೇನೆ ಎಂದರು.

ರೈತ ಇಡೀ ದೇಶದಲ್ಲಿ ಸಿಡಿದೆದ್ದಿದ್ದಾನೆ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಸತ್ತು ಹೋಗಿದೆ, ಹಿಟ್ಲರ್ ಮನಸ್ಥಿತಿಯ ಸರ್ಕಾರ ಇದೆ ಅನ್ನೋದಕ್ಕೆ ಇದೇ ಸಾಕ್ಷಿ ಎಂದ ಡಿಕೆಶಿ, ಬ್ರಿಟಿಷರ ವಿರುದ್ಧ ಕಾಂಗ್ರೆಸಿಗರು ಹೋರಾಟ ಮಾಡಿದ್ರು. ರೈತರು ಕಳೆದ ಹತ್ತು ತಿಂಗಳಿಂದ ಪ್ರತಿಭಟನೆ ಮಾಡಿದ್ರು. ಒಬ್ಬನೇ ಒಬ್ಬ ಸಚಿವ ರೈತರನ್ನ ಭೇಟಿ ಮಾಡಲಿಲ್ಲ. ಬ್ರಿಟಿಷರಿಗಿಂತಲೂ ಬಿಜೆಪಿ ಸರ್ಕಾರ ಒಂದು ಕೈ ಮೇಲು. ದೇಶದ ಮತದಾರ ಇಂದು ದಂಗೆ ಏಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಭಾನುವಾರ ರೈತರ ಪ್ರತಿಭಟನೆಯ ವೇಳೆ ನಡೆದ ಹಿಂಸಾಚಾರದಲ್ಲಿ ಬಲಿಯಾದ ಎಂಟು ಮಂದಿಯ ಕುಟುಂಬಗಳನ್ನು ಭೇಟಿಯಾಗಲು ಅನುಮತಿ ನೀಡದ ಪೊಲೀಸರು, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಇತರೆ ನಾಯಕರನ್ನು ಸೀತಾಪುರದಲ್ಲಿ ಬಂಧನಕ್ಕೊಳಪಡಿಸಿದ್ದಾರೆಂದು ಸೋಮವಾರ ತಿಳಿದುಬಂದಿದೆ.