ಬೆಳಗಾವಿ: ಅನ್ಯ ಧರ್ಮಿಯ ಯುವತಿಯನ್ನು ಪ್ರೀತಿಸುತ್ತಿದ್ದ ಯುವಕನ ಮೃತದೇಹ ಖಾನಾಪೂರ ಪಟ್ಟಣದ ಹೊರ ವಲಯದ ಖಾನಾಪೂರ-ಬೆಳಗಾವಿ ರಸ್ತೆಗೆ ಸಂಪರ್ಕಿಸುವ ರೈಲ್ವೆ ಹಳಿಯ ಮೇಲೆ ಅ.2 ರಂದು ಪತ್ತೆಯಾಗಿದ್ದು ಸಾವಿನ ಸುತ್ತ ಹಲವು ಅನುಮಾಗಳು ಹೆಡೆಯೆತ್ತಿವೆ. 24 ರ ಹರೆಯದ ಅ ಅರ್ಬಾಜ್ ಅಫ್ತಾಭ್ ಮುಲ್ಲಾ ಖಾನ್ ಮೃತಪಟ್ಟ ಯುವಕ. ಯುವಕನದು ವ್ಯವಸ್ಥಿತ ಕೊಲೆಯೆಂಬ ಆರೋಪ ಮೃತನ ತಾಯಿ ಹಾಗೂ ಇತರರಿಂದ ಕೇಳಿ ಬಂದಿದೆ. ಮೃತದೇಹವು ಎರಡು ತುಂಡುಗಳಾಗಿದ್ದು, ತಲೆಯ ಭಾಗದ (ರುಂಡ) ಮತ್ತು ದೇಹ ಬೇರೆಯಾಗಿ ಬಿದ್ದಿರುವುದು ಕಂಡುಬಂದಿದೆ.
ಮೃತ ಅರ್ಬಾಜ್ ಮೂಲತ: ಖಾನಾಪೂರದ ನಿವಾಸಿಯಾಗಿದ್ದು ಸದ್ಯ ಬೆಳಗಾವಿಯ ಅಜಯ್ ನಗರದಲ್ಲಿ ವಾಸಿಸುತಿದ್ದ. ಸಿವಿಲ್ ಇಂಜೀನಿಯರ್ ಪದವಿದರನಾಗಿರುವ ಅರ್ಬಾಜ್ ಬೆಳಗಾವಿಯಲ್ಲಿ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟದ ಡೀಲರ್ ಆಗಿದ್ದ. ಆತನ ತಂದೆ ಮೂರು ವರ್ಷದ ಹಿಂದೆ ಮೃತಪಟ್ಟಿದರು. ತಾಯಿ ನಾಜೀಮಾ ಮೊಹಮ್ಮದ್ ಸರಕಾರಿ ಶಾಲೆಯೊಂದರ ಶಿಕ್ಷಕಿ. ಅವನಿಗೆ ಒಬ್ಬಳೆ ಸಹೋದರಿಯಿದ್ದು ಆಕೆ ಎರೋನಾಟಿಕಲ್ ಇಂಜೀನಿಯರ್ ಆಗಿದ್ದು ಲಂಡನ್ ನಲ್ಲಿ ನೆಲೆಸಿದ್ದಾರೆ
ರೈಲ್ವೆ ಹಳಿಯ ಮೇಲೆ ಪತ್ತೆಯಾದ ಅರ್ಬಾಜ್ ಮೃತದೇಹವೂ ಸಂಪೂರ್ಣವಾಗಿ ವಿರೂಪಗೊಂಡಿದ್ದರೂ, ಮರಣೋತ್ತರ ಪರೀಕ್ಷೆ ಹಾಗೂ ಇತರೆ ತನಿಖೆಯಿಂದ ಅದೊಂದು ಹತ್ಯೆ ಎಂದು ತಿಳಿದುಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ, ಕಳೆದ ಒಂದೆರಡು ವರ್ಷಗಳಿಂದ ಅರ್ಬಾಜ್ ತನ್ನ ತನ್ನದೇ ಕಾಲೋನಿಯ ಹಿಂದೂ ಹುಡುಗಿಯನ್ನು ಪ್ರೀತಿಸುತ್ತಿದ್ದ. ಇದು ಹತ್ಯೆಗೆ ಕಾರಣವಾಗಿರಬಹುದೇ ಎಂಬ ನಿಟ್ಟಿನಲ್ಲೂ ತನಿಖೆ ಸಾಗಿದೆ ಎಂದು ಮೂಲಗಳು ತಿಳಿಸಿವೆ.
ಮೃತ ಅರ್ಬಾಜ್ ತಾಯಿ, ನಾಜೀಮಾ ಮೊಹಮ್ಮದ್ ಮಗನ ಸಾವಿನ ಬಗ್ಗೆ ಠಾಣೆಯಲ್ಲಿ ದೂರು ನೀಡಿದ್ದು, ಅದರಲ್ಲಿ ಮಗನ ಸಾವಿಗೆ ಅರ್ಬಾಜ್ ಪ್ರೀತಿಸುತ್ತಿದ್ದ ಯುವತಿಯ ತಂದೆ ಹಾಗೂ ಸ್ಥಳೀಯ ಬಲಪಂಥೀಯ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಐವರು ಕಾರಣ ಎಂದು ಆರೋಪಿಸಿದ್ದಾರೆ . ̤
” ಮೃತನ ತಾಯಿ ದೂರು ನೀಡಿದ ಬಳಿಕ ಶವ ದೊರೆತ ಪ್ರಕರಣವನ್ನು ಐಪಿಸಿ 302 (ಕೊಲೆ) ಅಡಿಯಲ್ಲಿ ಇದೊಂದು ಕೊಲೆ ಪ್ರಕರಣವೆಂದು ದಾಖಲಿಸಿದ್ದೇವೆ. ಆತನ ಸಾವು ರೈಲಿನಡಿಗೆ ಬಿದ್ದು ಸಂಭವಿಸಿಲ್ಲ ಎಂದೂ ತಿಳಿದು ಬಂದಿದು ಹಾಗಾಗಿ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಬೆಳಗಾವಿ ಜಿಲ್ಲಾ ಪೊಲೀಸರಿಗೆ ವರ್ಗಾಯಿಸಲಾಗುವುದು ಎಂದು ರೈಲ್ವೇಸ್ ಪೊಲೀಸ್ ವರಿಷ್ಠಾಧಿಕಾರಿ ಸಿರಿ ಗೌರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲಾ ಪೋಲಿಸ್ ನ ಹಿರಿಯ ಅಧಿಕಾರಿಯೊಬ್ಬರು ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, “ ಈ ಪ್ರಕರಣವನ್ನು ರೈಲ್ವೇ ಪೊಲೀಸರು ಇನ್ನಷ್ಟೇ (ಅ. 2ರಂದು) ಅಧಿಕೃತವಾಗಿ ಬೆಳಗಾವಿ ಜಿಲ್ಲಾ ಪೊಲೀಸರಿಗೆ ಹಸ್ತಾಂತರಿಸಬೇಕಿದೆ. ಹಾಗಾಗಿಯೂ ಜಿಲ್ಲಾ ಪೊಲೀಸ್ , ಈ ಸಾವಿನ ಬಗೆಗಿನ ಹಲವಾರು ಮಾಹಿತಿಯನ್ನು ಈಗಾಗಲೇ ಕಲೆ ಹಾಕಿದ್ದಾರೆ. ಮೆಲ್ನೋಟಕ್ಕೆ ಈ ಕೊಲೆ ಹಿಂದೂ ಹುಡುಗಿಯೊಂದಿಗೆ ಅರ್ಬಾಜ್ ಹೊಂದಿದ ಸಂಬಂಧಕ್ಕಾಗಿಯೇ ನಡೆದಿದೆ ಎಂದು ಗೋಚರಿಸುತ್ತದೆ ಎಂದು ತಿಳಿಸಿದ್ದಾರೆ.

ಪ್ರೀತಿ ಮೊದಲೇ ಗೊತ್ತಿತ್ತು …!
ಅರ್ಬಾಜ್ ತಾಯಿಯ ಪ್ರಕಾರ “ ಆರ್ಬಾಜ್ ಆ ಹುಡುಗಿಯನ್ನು ಕಳೆದ ಎರಡು ವರ್ಷದಿಂದ ಪ್ರೀತಿಸುತ್ತಿದ್ದ .ಇವರ ಪ್ರೀತಿಯ ವಿಷಯ ಹುಡುಗಿಯ ಮನೆಯವರಿಗೂ ಹಾಗೂ ಅರ್ಬಾಜ್ ಮನೆಯವರಿಗೂ ಈ ಮೊದಲೇ ತಿಳಿದಿತ್ತು. ಮೊದಲು ಈ ವಿಚಾರ ಅರ್ಬಾಜ್ ತಾಯಿ ನಾಜೀಮಾ ಮೊಹಮ್ಮದ್ ಗೆ ಗೊತ್ತಾಗಿತ್ತಂತೆ. ತಕ್ಷಣ ಆಕೆ ಈ ಬಗ್ಗೆ ಯುವತಿಯ ತಾಯಿಗೆ ತಿಳಿಸಿದ್ದಾರೆ ಹಾಗೂ ಮಗಳನ್ನು ಮನೆ ಕಡೆ ಕಳುಹಿಸಬೇಡಿ ಎಂದು ತಿಳಿಸಿದ್ದರು ಎನ್ನಲಾಗಿದೆ . ಅಲ್ಲದೇ ನಾಜೀಮಾ ಈ ಬಗ್ಗೆ ತನ್ನ ಮಗನಿಗೂ ಬುದ್ದಿ ಮಾತು ಹೇಳಿದ್ದು , ಈ ರೀತಿಯ ಅನ್ಯ ಧರ್ಮೀಯ ಯುವತಿಯನ್ನು ಪ್ರೀತಿಸುವುದು ಸರಿ ಬರುವುದಿಲ್ಲ ಅಂದಿದ್ದರಂತೆ.
ಸಿಮ್ ತುಂಡು – ಪೋಟೊ ಡಿಲಿಟ್
ಆ ಬಳಿಕ ಅರ್ಬಾಜ್ ಕುಟುಂಬಕ್ಕೆ ಯುವತಿಯ ಮನೆಯವರಿಂದ ಬೆದರಿಕೆ ಬರಲು ಆರಂಭಿಸಿತ್ತು. ಹಾಗಾಗಿ ನಾವು ಖಾನಾಪುರ ಪಟ್ಟಣದವರಾದ್ರೂ, ಸುರಕ್ಷತೆಯ ದೃಷ್ಟಿಯಿಂದ ಬೆಳಗಾವಿಗೆ ಶಿಪ್ಟ್ ಆದೆವು ಎಂದು ನಾಜೀಮಾ ತಿಳಿಸಿದ್ದಾರೆ. ಇದಾದ ಬಳಿಕ ಪ್ರೀತಿ ವಿಚಾರ ಬಲಪಂಥೀಯ ಸಂಘಟನೆಗಳಿಗೆ ಗೊತ್ತಾಗಿ ಅವರು ಅರ್ಬಾಜ್ ಗೆ ಧಮಕಿ ಹಾಕಲಾರಂಭಿಸುತ್ತಾರಂತೆ. ಪ್ರಕರಣವನ್ನು ಮುಗಿಸಲು ಖಾನಪುರಕ್ಕೆ ಬರುವಂತೆ ಯುವತಿಯ ಕಡೆಯವರು ಕರೆಮಾಡಿದ್ದು ಈ ಹಿನ್ನಲೆಯಲ್ಲಿ ಸೆ.26ರಂದು ನಾನು ಮತ್ತು ಅರ್ಬಾಜ್ ಅವರು ಹೇಳಿದ ಸ್ಥಳಕ್ಕೆ ಹೋಗಿದ್ದೆವು ಎಂದು ನಾಜಿಮಾ ಮಾಧ್ಯಮಗಳಿಗೆ ತಿಳಿಸಿದ್ದಾರೆ
ಪುಂಡಲೀಕ ಮಹಾರಾಜ ಎಂಬುವವರ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆದಿದ್ದು ಅರ್ಬಾಜ್ ತಾಯಿ ಮುಂದೆ ಮಗ ತಂಟೆಗೆ ಬರಲ್ಲಾ ಅಂತಾ ಅಲ್ಲಿ ಭರವಸೆ ನೀಡಿದ್ದು ,ಅಲ್ಲದೇ ಅರ್ಬಾಜ್ ಮೊಬೈಲ್ ನಲ್ಲಿದ್ದ ಆಕೆ ಫೋಟೋ ಸೇರಿದಂತೆ ಎಲ್ಲವನ್ನೂ ಡಿಲೀಟ್ ಮಾಡಿ ಸಿಮ್ ಕೂಡ ಮುರಿದು ಹಾಕಿದ್ದ ಎನ್ನಲಾಗಿದೆ. ಇದಾದ ಎರಡೇ ದಿನದಲ್ಲಿ ಆತನ ಮೃತದೇಹ ರೈಲ್ವೆ ಟ್ರಾಕ್ನಲ್ಲಿ ಸಿಕ್ಕಿದೆ.
ಸೆ. 28 ರಂದು ನಾಜೀಮಾ ತನ್ನ ಪಾಸ್ ಪೋರ್ಟ್ ನ ಕೆಲಸದ ನಿಮಿತ್ತ ಗೋವಾಕ್ಕೆ ಹೋಗಿದ್ದರು. ಸಂಜೆ 5 ಗಂಟೆ ಸುಮಾರಿಗೆ ಅರ್ಬಾಜ್ ಆಕೆಗೆ ಕರೆ ಮಾಡಿ ವಿಚಾರಿಸಿದ್ದಾನೆ. ಈ ವೇಳೆ ಇನ್ನು ಕೆಲ ಗಂಟೆಗಳಲ್ಲಿ ಮನೆಗೆ ಬರುವುದಾಗಿ ತಾಯಿ ತಿಳಿಸಿದ್ದಾರೆ. ಆದರೇ ನಾಜೀಮಾ 7 ಗಂಟೆ ಸುಮಾರಿಗೆ ಮನೆಗೆ ಬಂದು ನೋಡುವಾಗ ಅರ್ಬಾಜ್ ಅಲ್ಲಿರಲಿಲ್ಲ
ಇದಾದ ಎರಡು ದಿನಗಳ ಬಳಿಕ ಅರ್ಬಾಜ್ ತಾಯಿಗೆ ಕರೆ ಬಂದಿದ್ದು ನಿಮ್ಮ ಮಗನ ಶವ ಖಾನಾಪುರ ಹೊರ ವಲಯದ ಸೇತುವೆ ಬಳಿಯ ರೈಲು ಹಳಿಯಲ್ಲಿ ಸಿಕ್ಕಿದೆ ಅಂತಾ ತಿಳಿಸಿದ್ದಾರೆ. ಕುಟುಂಬಸ್ಥರು ಕೂಡಲೇ ಸ್ಥಳಕ್ಕೆ ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡ ಮಾದರಿಯಲ್ಲಿ ಅರ್ಬಾಜ್ ಶವ ಕಂಡು ಗಾಬರಿಯಾಗಿದ್ದಾರೆ. ಇದಾದ ಬಳಿಕ ಆತನ ಸಾವಿನ ಮೇಲೆ ಡೌಟ್ ಬಂದ ಕುಟುಂಬಸ್ಥರು ಇದನ್ನ ಯುವತಿ ಕುಟುಂಬಸ್ಥರು ಮತ್ತು ಎರಡು ದಿನಗಳ ಹಿಂದೆ ಮಧ್ಯಸ್ಥಿಕೆ ವಹಿಸಿ ರಾಜಿಪಂಚಾಯಿತಿ ಮಾಡಿದವರೇ ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.