ಮಂಗಳೂರು, ಅ.3: ಇಲ್ಲಿಗೆ ಸಮೀಪದ ಗುರುಪುರದ ಚಿಲಿಂಬಿ ಗುಡ್ಡೆ ಎಂಬಲ್ಲಿ ಇಬ್ಬರು ಹಿಂದು ಹುಡುಗಿಯರ ಜೊತೆ ಅನ್ಯಕೋಮಿನ ಯುವಕ ಹಾಗೂ ಇನ್ನೊಬ್ಬ ಹಿಂದೂ ಯುವಕ ತಿರುಗಾಡುತ್ತಿರುವುದನ್ನು ಗಮನಿಸಿದ ಬಜರಂಗದಳದ ಕಾರ್ಯಕರ್ತರು ನಾಲ್ವರನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ಅ. 3 ರಂದು ಸಂಜೆ ನಡೆದಿತ್ತು. ಅಲ್ಲಿ ಪತ್ತೆಯಾದ ಇಬ್ಬರು ಯುವತಿಯರ ಪೈಕಿ ಒಬ್ಬಳು ಅಪ್ರಾಪ್ತೆಯಾಗಿದ್ದು ಆಕೆಯ ತಾಯಿ ನೀಡಿದ ದೂರಿನಂತೆ ಇಬ್ಬರು ಯುವಕರ ವಿರುದ್ದ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಬೋಂದೆಲ್ ನಿವಾಸಿ ಧೀರಜ್ ಮತ್ತು ಪಂಜಿಮೊಗರಿನ ಶಾಕೀರ್ ಬಂಧಿತರು. ಇವರ ವಿರುದ್ದ ಬಜ್ಪೆಯಲ್ಲಿ ಒಟ್ಟು ಎರಡು ಪ್ರಕರಣಗಳು ದಾಖಲಾಗಿವೆ. ಜತೆಯಲ್ಲಿದ್ದ 16 ರ ಹರೆಯದ ಅಪ್ರಾಪ್ತ ಬಾಲಕಿಯನ್ನು ಬಲವಂತವಾಗಿ ಕರಕೊಂಡು ಬಂದು ಕಿರುಕುಳ ನೀಡಿದ ಆರೋಪದ ಮೇರೆಗೆ ಪೊಕ್ಸೋ ಪ್ರಕರಣ ಹಾಗೂ ಅವರಿಬ್ಬರು ಡ್ರಗ್ಸ್ ಸೇವಿಸಿದ ಆರೋಪದ ಮೇರೆಗೆ ಎನ್ ಡಿ ಪಿಎಸ್ ಅಕ್ಟ್ ನಲ್ಲಿ ಪ್ರಕರಣ ದಾಖಲಾಗಿದೆ.
ಇಬ್ಬರು ಯುವಕರು ಹಾಗೂ ಇಬ್ಬರು ಯುವತಿಯರು ಜತೆಯಾಗಿ ಕಾರಿನಲ್ಲಿ ಸುತ್ತಾಡಲು ಚಿಲಿಂಬಿ ಗುಡ್ಡೆಗೆ ಬಂದಿದ್ದರು ಭಾನುವಾರ ಮಧ್ಯಾಹ್ನ ಬಂದಿದ್ದರು ಎನ್ನಲಾಗಿದೆ. ಇದರ ಮಾಹಿತಿ ಪಡೆದ ಬಜರಂಗದಳದ ಕಾರ್ಯಕರ್ತರು ಅವರನ್ನು ಸ್ಥಲದಲ್ಲೆ ವಿಚಾರಣೆ ನಡೆಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಆ ನಾಲ್ವರು ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಬಂದಿರುವುದನ್ನು ಗಮನಿಸಿದ್ದು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಹಾಗೂ ಯುವತಿಯರ ಮನೆಯವರಿಗೂ ಮಾಹಿತಿ ರವಾನಿಸಿದ್ದಾರೆ.

ಇಬ್ಬರು ಯುವತಿಯರಲ್ಲಿ ಒಬ್ಬಾಕೆ 16 ವರ್ಷದ ಅಪ್ರಾಪ್ತ ಬಾಲಕಿಯಾಗಿದ್ದು ಆಕೆಯ ತಾಯಿ ಠಾಣೆಗೆ ದೂರು ನೀಡಿದ್ದಾರೆ. ನನ್ನ ಮಗಳನ್ನು ಬಲವಂತದಿಂದ ಕರೆದೊಯ್ದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದು ಅದರನ್ವಯ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ.
ಇಬ್ಬರು ಯುವಕರು ಮಾದಕ ದ್ರವ್ಯ ಸೇವಿಸಿದ್ದು ತನಿಖೆಯಲ್ಲಿ ಕಂಡುಬಂದಿದ್ದೂ ಈ ಬಗ್ಗೆ ವೈದ್ಯಕೀಯ ತಪಾಸಣೆ ನಡೆಸಲಾಯಿತ್ತು . ಇದರಲ್ಲಿ ಮಾದಕ ದ್ರವ್ಯ ಸೇವನೆ ದೃಢಪಟ್ಟಿದೆ ಎನ್ನಲಾಗಿದೆ.

ಬಂಧಿತ ಆರೋಪಿಗಳು ಸ್ನೇಹಿತರಾಗಿದ್ದು ಶಾಕಿರ್ ಕಾರಿನಲ್ಲಿ ಚಿಲಿಂಬಿ ಗುಡ್ಡೆಗೆ ತೆರಳಿದ್ದರು. ಅಲ್ಲಿಗೆ ಧೀರಜ್ ಲವರ್ ಎನ್ನಲಾದ ಒಬ್ಬಳು ಹುಡುಗಿಯನ್ನೂ ಕರೆದಿದ್ದು ಆಕೆ ತನ್ನ ಸ್ನೇಹಿತೆಯನ್ನೂ ಕರೆತಂದಿದ್ದಾಳೆ ಎಂದು ಮೂಲಗಳು ತಿಳಿಸಿವೆ.
