ಮಂಗಳೂರು: ಪಿಲಿಕುಳ ವನ್ಯಜೀವಿ ಧಾಮದ ಗೂಡಿನಲ್ಲಿದ್ದ ಸಿಂಹವೊಂದು ನೌಕರನೊಬ್ಬನ ಎಡವಟ್ಟಿನಿಂದ ಹೊರ ಬಂದು ಕೆಲ ಗಂಟೆಗಳ ಕಾಲ ಅಲ್ಲಿನ ಸಿಬಂದಿಗಳಲ್ಲಿ ಆತಂಕ ಮೂಡಿಸಿದ ಘಟನೆ ಕೆಲ ತಿಂಗಳುಗಳ ಹಿಂದೆ ನಡೆದಿದ್ದೂ ತಡವಾಗಿ ಬೆಳಕಿಗೆ ಬಂದಿದೆ.
ಜುಲೈ ತಿಂಗಳ ಒಂದು ದಿನ ಪಿಲಿಕುಳದ ಡಾ.ಶಿವರಾಮ ಕಾರಂತ ವನ್ಯಜೀವಿ ಧಾಮದ ಗೂಡಿನಲ್ಲಿದ್ದ ಸಿಂಹವೊಂದಕ್ಕೆ ಆಹಾರ ನೀಡಲು ಹೋದ ನೌಕರನೊಬ್ಬ ಗೂಡಿನ ಬಾಗಿಲು ಮುಚ್ಚಲು ಮರೆತಿದ್ದಾನೆ . ಸ್ವಲ್ಪ ಹೊತ್ತಿನ ಬಳಿಕ ಆತ ಹಿಂತುರುಗಿ ಬಂದು ನೋಡಿದಾಗ, ಗೂಡಿನ ಬಾಗಿಲು ತೆರೆದಿದ್ದು, ಒಳಗೆ ಸಿಂಹ ಇರಲಿಲ್ಲ.
ಪಿಲಿಕುಳದಲ್ಲಿ ವನ್ಯ ಜೀವಿಗಳ ಸುತ್ತಾಟಕ್ಕೆ ವಿಶಾಲವಾದ ಅವರಣವಿದ್ದು ಇದರ ಕೊನೆಯಲ್ಲಿ ಆಳವಾದ ಕಂದಕ ಹಾಗೂ ಬೇಲಿ ಹಾಕಲಾಗಿದೆ.ಇದರ ಹೊರಗೆ ಹೊರಗೆ ನಿಂತು ಪ್ರವಾಸಿಗಳು ಸುರಕ್ಷಿತವಾಗಿ ಪ್ರಾಣಿಗಳನ್ನು ವೀಕ್ಷಿಸುತ್ತಾರೆ. ಈ ಅವರಣದ ಒಂದು ಬದಿಯಲ್ಲಿ ಮೃಗಗಳಿಗೆ ಮಲಗುವುದಕ್ಕೆ ಗೂಡುಗಳನ್ನು ಅಳವಡಿಸಲಾಗಿದೆ. ಗೂಡಿನ ಬಳಿ ಕಂದಕ ಇರುವುದಿಲ್ಲ. ಹೀಗಾಗಿ ಗೇಟ್‌ನ ಚಿಲಕ ಹಾಕಲು ನೌಕರ ಮರೆತ ಸಂದರ್ಭ ಸಿಂಹ ಹೊರಗೆ ಬಂದಿದೆ.

ಗೂಡಿನಲ್ಲಿ ಸಿಂಹ ಇಲ್ಲದಿರುವ ಮಾಹಿತಿಯನ್ನು ಆ ನೌಕರ ಮೇಲಾಧಿಕಾರಿಗಳಿಗೆ ನೀಡಿದ್ದಾನೆ . ಕೂಡಲೇ ಕಾರ್ಯಪ್ರವೃತ್ತರಾದ ನಿರ್ದೇಶಕ ಎಚ್.ಜಯಪ್ರಕಾಶ್ ಭಂಡಾರಿ ಅವರು ಮೂರು ತಂಡ ರಚನೆ ಮಾಡಿ ಮೃಗಲಾಯದ ಅವರಣ ಶೋಧಿಸಿದ್ದಾರೆ. ಅಲ್ಲಿನ ಸಿಬ್ಬಂದಿಗಳಿಗೂ ಸುರಕ್ಷಿತ ಜಾಗದಲ್ಲಿರುವಂತೆ ನಿರ್ದೇಶನ ನೀಡಿದ್ದಾರೆ.

ಸುಮಾರು ಮೂರು ಗಂಟೆಗಳ ಹುಡುಕಾಟದ ಬಳಿಕ ಸಿಂಹವೂ ಗೂಡಿನ ಹಿಂಭಾಗದ ಪ್ಯಾಡಕ್ (ಬೇಲಿ ಹಾಕಿದ ಆವರಣ)ನಲ್ಲಿ ಹುಲ್ಲಿನ ಮರೆಯಲ್ಲಿ ಪತ್ತೆಯಾಗಿದೆ. ಅದನ್ನು ಟ್ರಾಂಕ್ವಿಲೈಜ್ (ಪ್ರಜ್ಞೆ ತಪ್ಪಿಸುವುದು) ಮಾಡಿ ಮತ್ತೆ ಗೂಡಿಗೆ ಸೇರಿಸಲಾಯಿತು.ಇಂತಹ ಘಟನೆ ನಡೆದಾಗ ಸನ್ನದ್ಧರಾಗಲು ನಮಗೂ ಒಂದು ತರಬೇತಿ ನೀಡಿದಂತಾಯಿತು, ಅದೃಷ್ಟವಷಾತ್ ಯಾವುದೇ ಅಪಾಯ ನಡೆದಿಲ್ಲ, ಸಿಂಹ ಹೊರಬಂದಿಲ್ಲ, ಪ್ಯಾಡಕ್‌ನಲ್ಲೇ ಇತ್ತು ಎನ್ನುತ್ತಾರೆ ಭಂಡಾರಿ.
