ಮುಳ್ಳೇರಿಯ: ಅಚಾನಕ್ ಆಗಿ ರಸ್ತೆ ಮಧ್ಯೆ ಬಂದ ಕಾಡು ಹಂದಿಗೆ ಸ್ಕೂಟರಿಗೆ ಡಿಕ್ಕಿ ಹೊಡೆದು ಸವಾರ ಮೃತಪಟ್ಟ ಘಟನೆ ಆ 2 ರಂದು ಶನಿವಾರ ಕಾಸರಗೋಡು ಜಿಲ್ಲೆಯ ಮುಳ್ಳೇರಿಯ ಎಂಬಲ್ಲಿ ನಡೆದಿದೆ. ಅಪಘಾತಕ್ಕೆ ತುತ್ತಾದ ಕಾಡು ಹಂದಿಯೂ ಸ್ಥಳದಲ್ಲಿ ಸತ್ತು ಬಿದ್ದಿದೆ
ಮುಳ್ಳೇರಿಯ ಬಳಿಯ ಕಾವುಂಗಲ್ ನಿವಾಸಿ ಕುಞಂಬು ನಾಯರ್(60) ಮೃತಪಟ್ಟವರು. ಗಂಭೀರವಾಗಿ ಗಾಯಗೊಂಡ ಇವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ ಸಂಜೆ ಅವರು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು.
ಶನಿವಾರ ಬೆಳಗ್ಗೆ 9.30 ರ ಸುಮಾರಿಗೆ ಮುಳ್ಳೇರಿಯ ಬಳಿಯ ಬಾಳಕಂಡಂ ತಿರುವಿನಲ್ಲಿ ಈ ಘಟನೆ ನಡೆದಿದೆ. ಸಾಮಾನು ಖರೀದಿಸಲೆಂದು ಮುಳ್ಳೇರಿಯ ಪೇಟೆಗೆ ಹೋಗಿದ್ದ ಕುಞಂಬು ನಾಯರ್ ಮನೆಗೆ ಹಿಂತಿರುಗುತ್ತಿರುವ ವೇಳೆ ಹಂದಿಗಳ ಹಿಂಡು ರಸ್ತೆ ಗಡ್ಡವಾಗಿ ಓಡಿದೆ. ಈ ವೇಳೆ ಕುಞಂಬು ನಾಯರ್ ಸ್ಕೂಟರಿನ ವೇಗ ಕಡಿಮೆ ಮಾಡಿದ್ದು, ಅದೇ ವೇಳೆ ಒಂದು ಹಂದಿ ವೇಗದಿಂದ ರಸ್ತೆಗಡ್ಡ ಓಡಿದ್ದು ಇವರ ಸ್ಕೂಟರಿಗೆ ಡಿಕ್ಕಿ ಹೊಡೆದಿದೆ.


ಗಂಭೀರ ಗಾಯಗೊಂಡ ಕುಞಂಬುನಾಯರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದರು.. ಸತ್ತ ಹಂದಿಯನ್ನು ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಸೀಮೆ ಎಣ್ಣೆ ಸುರಿದು ಕಿಚ್ಚಿಟ್ಟು ನಂತರ ಹೂತು ಹಾಕಿದ್ದಾರೆ.
