ಕಾಲೇಜ್ ವಿದ್ಯಾರ್ಥಿನಿಯೊಬ್ಬಳು ರೇಬಿಸ್ ವೈರಸ್‌ಗೆ ತುತ್ತಾಗಿ ಮೃತಪಟ್ಟ ಧಾರುಣ ಘಟನೆ ಅ. 1 ರಂದು ಕಡಬ ತಾಲೂಕಿನ ಆಲಂಕಾರು ಗ್ರಾಮದಲ್ಲಿ ನಡೆದಿದೆ. ಆಲಂಕಾರು ಗ್ರಾಮದ ಕೆದಿಲ ವರ್ಗಿಸ್ ಅವರ ಪುತ್ರಿ ವಿನ್ಸಿ ಸಾರಮ್ಮ (17) ಮೃತ ದುರ್ದೈವಿ. ಈಕೆ ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ.
ಗುರುವಾರ ಬೆಳಿಗ್ಗೆ ವಿನ್ಸಿಗೆ ತಲೆ ನೋವು ಕಾಣಿಸಿಕೊಂಡಿತ್ತು. ನೋವು ಶಮನಕ್ಕಾಗಿ ಸ್ಥಳೀಯ ಆಸ್ಫತ್ರೆಯಿಂದ ಮದ್ದು ತರಲಾಗಿತ್ತು. ಸಂಜೆಯ ವೇಳೆಗೆ ರೋಗ ಮತ್ತಷ್ಟು ಉಲ್ಭಣಿಸಿತ್ತು. ಹೀಗಾಗಿ ಆಕೆಯನ್ನು ಪುತ್ತೂರು ಖಾಸಗಿ ಆಸ್ಫತ್ರೆಗೆ ಕರೆದುಕೊಂಡು ಹೋಗಿ ಬಳಿಕ ಮಂಗಳೂರಿನ ಜಿಲ್ಲಾಸ್ಫತ್ರೆಗೆ ದಾಖಲಿಸಲಾಗಿತ್ತು. ಆದರೇ ಗುರುವಾರ ತಡ ರಾತ್ರಿ ಆಕೆ ನಿಧನ ಹೊಂದಿದ್ದಾರೆ.
ನಾಲ್ಕು ತಿಂಗಳ ಹಿಂದೆ ಅಲಂಕಾರು ಪೇಟೆ ಹಾಗೂ ಇವರ ಮನೆಯ ಸುತ್ತಮುತ್ತ ಹುಚ್ಚುನಾಯಿ ಹಾವಳಿ ಇಟ್ಟಿತ್ತು ಹಾಗೂ ಇಬ್ಬರ ಮೇಲೆ ದಾಳಿ ಕೂಡ ಮಾಡಿತ್ತು. ಅಲ್ಲದೇ, ಈ ಪರಿಸರದ ಹಲವು ನಾಯಿಗಳಿಗೆ ಈ ಹುಚ್ಚು ನಾಯಿ ಕಚ್ಚಿತ್ತು ಎನ್ನಲಾಗಿದೆ. ಮೃತ ವಿನ್ಸಿ ಮನೆಯ ನಾಯಿಯು ಕೆಲವು ತಿಂಗಳುಗಳ ಹಿಂದೆ ರೇಬಿಸ್‌ಗೆ ಒಳಗಾಗಿ ಸಾವನ್ನಪ್ಪಿತ್ತು. ಅದೇ ನಾಯಿಯ ವೈರಸ್ ವಿದ್ಯಾರ್ಥಿನಿಗೂ ತಗಲಿರಬಹುದೆಂದು ಈಗ ಶಂಕೆ ವ್ಯಕ್ತವಾಗಿದೆ.

ವಿನ್ಸಿ ಮನೆಯಲ್ಲಿ ದುರಂತಗಳ ಸರಮಾಲೆ
ವಿನ್ಸಿಗೆ ಒರ್ವ ಸಹೋದರನಿದ್ದು ಆತ ನಾಲ್ಕು ವರ್ಷಗಳ ಅಕಸ್ಮಿಕವಾಗಿ ನದಿಗೆ ನೀರಿಗೆ ಬಿದ್ದು ಮೃತಪಟ್ಟಿದ್ದ. 2018ರ ಎಪ್ರಿಲ್‌ನಲ್ಲಿ ಆತ ಅಡೋಲೆಯ ಅಜ್ಜಿ ಮನೆಗೆ ಹೋಗಿದ್ದಾಗ ದುರ್ಘಟನೆ ಸಂಭವಿಸಿತ್ತು. ಈ ಮೂಲಕ ವರ್ಗಿಸ್ ದಂಪತಿಗಳು ಬೆಳೆದು ನಿಂತ ಇಬ್ಬರೂ ಮಕ್ಕಳನ್ನು ಅಕಾಲಿಕವಾಗಿ ಕಳೆದುಕೊಂಡು ದು:ಖದ ಮಡುವಿನಲ್ಲಿ ತೇಲಾಡುತ್ತಿದ್ದಾರೆ . ಮಗಳ ಸಾವಿನ ಬಳಿಕ ನಿನ್ನೆ ಮನೆಯವರ ಆಕ್ರಂಧನ ಮುಗಿಲು ಮುಟ್ಟಿತ್ತು.