ಬೆಳ್ತಂಗಡಿ : ವಿದ್ಯುತ್ ಶಾಕ್ ತಗುಲಿ ಮೂರ್ಛೆ ತಪ್ಪಿ ಬಿದ್ದ ಯುವಕನಿಗೆ ವ್ಯಕ್ತಿಯೊಬ್ಬ ತನ್ನ ಬಾಯಿಯಿಂದ ಕೃತಕ ಉಸಿರಾಟ ನೀಡಿ ಪಾಯದಿಂದ ಪಾರು ಮಾಡಿದ ಘಟನೆಯೊಂದು ಬೆಳ್ತಂಗಡಿ ತಾಲೂಕಿನ ಕುಂಟಿನಿ ಬಳಿಯಿಂದ ವರದಿಯಾಗಿದೆ.
ಕುಂಟಿನಿ ಸಮೀಪ ರಿಜ್ವನ್ ವಿದ್ಯುತ್ ಶಾಕ್ ಗೆ ತುತ್ತಾದ ಯುವಕ. ವೃತ್ತಿಯಲ್ಲಿ ಪೈಂಟರ್ ಆಗಿರುವ ಆಸೀಫ್ ಪ್ರಥಮ ಚಿಕಿತ್ಸೆ ನೀಡಿ ಮಾನವೀಯತೆ ಹಾಗೂ ಸಮಯ ಪ್ರಜ್ಞೆ ಮೆರೆದ ಯುವಕ
ತಮ್ಮ ಮನೆ ಸಮೀಪ ತೆಂಗಿನ ಮರದ ಗರಿ ವಿದ್ಯುತ್ ತಂತಿಗೆ ಬೀಳುವ ಸಾಧ್ಯತೆಯಿದ್ದ ಹಿನ್ನಲೆಯಲ್ಲಿ ಅದನ್ನು ತುಂಡರಿಸಲು ರಿಜ್ವನ್ ಯತ್ನಿಸಿದ್ದಾರೆ. ಈ ವೇಳೆ ಗರಿ ವಿದ್ಯುತ್ ತಂತಿಗೆ ತಾಗಿದ ಪರಿಣಾಮ ರಿಜ್ವನ್ ವಿದ್ಯುತ್ ಶಾಕ್ ಹೊಡೆದು ಕೆಳಗೆ ಉರುಳಿ ಬಿದ್ದಿದ್ದಾರೆ . ಈ ವೇಳೆ ಅವರು ಪ್ರಜ್ನೆ ಕೂಡ ಕಳಕೊಂಡಿದ್ದಾರೆ.
ಈ ವಿಚಾರ ಅಲ್ಲೇ ಸಮೀಪದಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದ ಆಸೀಫ್ ಎಂಬುವರಿಗೆ ಗೊತ್ತಾಗಿದೆ. ಕೂಡಲೇ ಅವರು ಸ್ಥಳಕ್ಕೆ ಧಾವಿಸಿ ರಿಜ್ವನ್ ಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ತನ್ನ ಬಾಯಿಂದ ಕೃತಕ ಉಸಿರಾಟ ನೀಡಿ ಅವರನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.ಬಳಿಕ ರಿಜ್ವನ್ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಚೇತರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
